ವರ ಕೇರಳ, ವಧು ಮಡಿಕೇರಿ – ಮದುವೆ ಮೇಲೆ ಕೇರಳ ಕೊರೊನಾ ಛಾಯೆ

Public TV
2 Min Read

– ಕೋವಿಡ್ ರಿಪೋರ್ಟ್ ಗಾಗಿ ಅಲೆದಾಟ

ಮಡಿಕೇರಿ: ಕೇರಳದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕರ್ನಾಟಕಕ್ಕೆ ಎಂಟ್ರಿ ನೀಡಲಾಗುತ್ತಿಲ್ಲ. ಕೊರೊನಾದಿಂದಾಗಿ ಮಡಿಕೇರಿಯ ಕಡಗದಾಳು ಗ್ರಾಮದ ರೋಹಿಣಿ-ಜಯಪ್ಪನಾಯ್ಕ ಮನೆಯಲ್ಲಿ ಆತಂಕ ಆವರಿಸಿದೆ. ರೋಹಿಣಿ-ಜಯಪ್ಪನಾಯ್ಕ ದಂಪತಿಯ ಮಗಳಾದ ಆಶಾ ಅವರಿಗೂ ಕಾಸರಗೋಡು ಜಿಲ್ಲೆ ಮುಳಿಯಾರ್‍ನ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್‍ಗೂ ಮದುವೆ ಫಿಕ್ಸ್ ಆಗಿದೆ. ಮಾರ್ಚ್ 1ರಂದು ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮದುವೆ ನಡೆಯಬೇಕಾಗಿದೆ.

ಕೇರಳದಿಂದ ಕೊಡಗಿಗೆ ಬರುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಲೇಬೇಕಾಗಿದೆ. ಈ ರೂಲ್ಸ್ ಇದೀಗ ಆಶಾ-ಪ್ರಮೋದ್ ಮದುವೆಗೆ ಅಡ್ಡಿಯಾಗಿದೆ. ರೂಲ್ಸ್ ಮಾಡಿರೋದು ಸರಿ. ಆದರೆ ಸಡನ್ ಆಗಿ ಈ ರೂಲ್ಸ್ ಮಾಡಿರೋದು ನಮಗೆ ತಿಳಿದಿಲ್ಲ. ಈಗ ವಿಷಯ ತಿಳಿದು ಪರಿತಪಿಸುವಂತಾಗಿದೆ ಎಂದು ಆಶಾ ತಾಯಿ ರೋಹಿಣಿ ಹೇಳುತ್ತಾರೆ.

ಕೋವಿಡ್ ಟೆಸ್ಟ್ ಮಾಡಿಸೋಕೆ ನಮಗೇನೂ ಅಭ್ಯಂತರ ಇಲ್ಲ. ಆದರೆ ಶನಿವಾರ, ಭಾನುವಾರ ರಜೆ ಇದೆ. ಜಿಲ್ಲಾಡಳಿತ ನೆಗೆಟಿವ್ ರಿಪೋರ್ಟ್ ಕೊಡೋದೂ ಲೇಟಾಗತ್ತೆ. ಒಂದು ವೇಳೆ ಖಾಸಗಿಯಾಗಿ ಟೆಸ್ಟ್ ಮಾಡಿಸುವುದಾದರೆ ಒಬ್ಬರ ಟೆಸ್ಟ್ ಗೆ ಎರಡೂವರೆ ಸಾವಿರ ಕೊಡಬೇಕಾಗಿದೆ. ವರ ಮತ್ತು ಆತನ ತಂದೆ ತಾಯಿ ಹಾಗೂ ಆಪ್ತ ನೆಂಟರಿಷ್ಟರೆಂದರೂ ಕನಿಷ್ಠ ಹತ್ತರಿಂದ 12 ಜನರು ವಿವಾಹಕ್ಕೆ ಕರ್ನಾಟಕಕ್ಕೆ ಬರಬೇಕಾಗಿದೆ. ಅಷ್ಟು ಜನರಿಗೆ ಖಾಸಗಿಯಾಗಿ ಕೋವಿಡ್ ಟೆಸ್ಟ್ ಮಾಡಿಸಲು 20 ರಿಂದ 25 ಸಾವಿರ ವ್ಯಯಿಸಬೇಕಾಗಿದೆ.

ಒಂದು ವೇಳೆ ಟೆಸ್ಟ್ ಮಾಡಿಸಿದರು, ಶನಿವಾರ ಭಾನುವಾರ ರಜೆಗಳು ಇರುವುದರಿಂದ 72 ಗಂಟೆ ಒಳಗಾಗಿ ವರದಿ ಪಡೆಯುವುದು ತೀರಾ ಕಷ್ಟವಾಗಿದೆ. ಹೀಗಾಗಿ ಸೋಮವಾರ ಬೆಳಗ್ಗೆ 10 ಗಂಟೆ 45 ನಿಮಿಷಕ್ಕೆ ನಡೆಯುವ ವಿವಾಹ ನಡೆಯುವುದೋ ಇಲ್ಲವೋ ಅನ್ನೋ ಆತಂಕ ಎದುರಾಗಿದೆ. ಈಗ ಏನ್ ಮಾಡೋದು ಅಂತ ಚಿಂತೆಯಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ನಮ್ಮ ಮದುವೆಗೆ ಪರ್ಮಿಷನ್ ನೀಡಬೇಕು ಎಂದು ರೋಹಿಣಿ ಮನವಿ ಮಾಡಿಕೊಂಡಿದ್ದಾರೆ.

ಕೂಲಿ ಮಾಡಿ ಮಗಳ ಮದುವೆ ಮಾಡುತ್ತಿರುವ ರೋಹಿಣಿ ಮತ್ತು ಜಯಪ್ಪನಾಯಕ ಈಗಾಗಲೇ ಮಡಿಕೇರಿ ಸಮೀಪದ ಕೂರ್ಗ್ ಹೆರಿಟೇಜ್ ಎನ್ನೋ ಚೌಟರಿ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದ್ದಾರೆ. ಮದುವೆ ಸಮಾರಂಭಕ್ಕೆ ನೂರಾರು ನೆಂಟರಿಷ್ಟರಿಗೂ ಹೇಳಲಾಗಿದ್ದು ಏನು ಮಾಡುವುದೋ ಎನ್ನೋದೆ ತೋಚದಂತೆ ಆಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *