ವರ್ಕ್ ಫ್ರಮ್ ಹೋಮ್- ಇಂಟರ್ನೆಟ್‌ಗಾಗಿ ಗುಡ್ಡ ಹತ್ತಿ ಟೆಂಟ್ ಹಾಕಿದ ಯುವತಿ

Public TV
1 Min Read

– ಗದ್ದೆಯ ಗುಡಿಸಲಿನಲ್ಲಿ ಮಹಿಳಾ ಉದ್ಯೋಗಿಯ ವರ್ಕ್ ಫ್ರಮ್ ಹೋಮ್

ಶಿವಮೊಗ್ಗ: ಮೊಬೈಲ್ ನೆಟ್ವರ್ಕ್‍ನಲ್ಲಿ 4-ಜಿ ತಂತ್ರಜಾನ ಹಳೆಯದಾಗಿ 5-ಜಿಯತ್ತ ಜನರು ಚಿತ್ತಹರಿಸಿದ್ದಾರೆ. ಮೊಬೈಲ್ ಫೋನ್‍ಗಳೂ ಕೂಡ 5-ಜಿ ತಂತ್ರಜ್ಞಾನಕ್ಕೆ ತಕ್ಕಂತೆ ಸಿದ್ಧವಾಗುತ್ತಿವೆ. ಆದರೆ ಮಲೆನಾಡಿನ ಭಾಗದಲ್ಲಿ ಹಲವು ಕಡೆ ಇಂದಿಗೂ ಮೊಬೈಲ್ ನೆಟ್‍ವರ್ಕ್ ಸಿಗ್ನಲ್ ಕೂಡ ಸಿಗುವುದಿಲ್ಲ. ಇಂಟರ್ ನೆಟ್ ಹುಡುಕಿ ಕಾಡು ಮೇಡು ಅಲೆದು, ಗುಡ್ಡ ಹತ್ತಿ, ಊರಿನಾಚೆ ಹೋಗುವ ದುಸ್ಥಿತಿ ಇದೆ. ವರ್ಕ್ ಫ್ರಮ್ ಹೋಮ್ ಇರುವುದರಿಂದ ನೆಟ್‍ವರ್ಕ್‍ಗಾಗಿ ಜಿಲ್ಲೆಯ ಯುವತಿ ಗುಡ್ಡ ಹತ್ತಿ ಟೆಂಟ್ ಹಾಕಿದ್ದಾರೆ.

ಜಿಲ್ಲೆಯ ಹೊಸನಗರ ತಾಲೂಕಿನ ವಾರಂಬಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲಾಕ್‍ಡೌನ್ ಹಿನ್ನೆಲೆ ಗ್ರಾಮದ ಯುವತಿ ಬೆಂಗಳೂರಿನಿಂದ ಗ್ರಾಮಕ್ಕೆ ಮರಳಿದ್ದು, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಯುವತಿ ಸಿಂಧು ಬಿ.ಕಾಂ ಪದವಿಧರೆ ಆಗಿದ್ದು, ಬೆಂಗಳೂರಿನ ಸಿಎ ಬಳಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನೆಟ್‍ವರ್ಕ್ ಸಮಸ್ಯೆ ಇರುವ ಕಾರಣ ಬೇರೊಬ್ಬರ ಗದ್ದೆಯಲ್ಲಿ ಗುಡಿಸಲು ನಿರ್ಮಿಸಿಕೊಂಡು ನೆಟ್ವರ್ಕ್ ಇರುವೆಡೆ ಕೆಲಸ ನಿರ್ವಹಿಸುತ್ತಿದ್ದಾಳೆ.

ಕಷ್ಟ ಆದರೂ ಕೆಲಸ ನಿರ್ವಹಿಸಬೇಕು, ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ತಂತ್ರಜ್ಞಾನ ಮುಂದುವರಿದಂತೆ ಮಲೆನಾಡು ಕುಗ್ರಾಮಗಳ ಪ್ರದೇಶವಾಗಿಯೇ ಉಳಿಯುತ್ತಿದೆ. ಯಾವುದೇ ಜನ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಪ್ರತಿಯೊಂದನ್ನೂ ಡಿಜಿಟಲ್ ಇಂಡಿಯಾ ಅಡಿ ತಂದು ಅಂತರ್ಜಾಲ ಅಗತ್ಯ ಎಂಬಂತಾಗಿದೆ. ಆದರೆ ನಮ್ಮಲ್ಲಿ ಫೋನ್ ಮಾಡಲೂ ಸಹ ಅಲೆದಾಡುವ ಪರಿಸ್ಥಿತಿ ಇದೆ ಎಂದು ಇಲ್ಲಿನ ಯುವಕರು ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯ ಹೊಸನಗರ ಹಾಗೂ ಸಾಗರದ ಕೆಲವು ಪ್ರದೇಶಗಳಲ್ಲಿ ನೆಟ್‍ವರ್ಕ್ ಸಮಸ್ಯೆ ಇದೆ. ಮೊಬೈಲ್ ಟವರ್ ಹಾಕಿಸಿ ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರು ನಿರಂತರವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *