ವರದಕ್ಷಿಣೆ ತರಲಿಲ್ಲ ಅಂತ ಮೊದ್ಲ ಪತ್ನಿ ಬಿಟ್ಟ – ಹೆಣ್ಣು ಮಗುವಾಗಿದ್ದಕ್ಕೆ 2ನೇ ಹೆಂಡ್ತಿ ಬಿಟ್ಟು ಮತ್ತೆ ಮದ್ವೆ

Public TV
1 Min Read

– ಮೂವರು ಯುವತಿಯರ ಜೊತೆ ಶಿಕ್ಷಕ ವಿವಾಹ

ಹೈದರಾಬಾದ್: ಶಿಕ್ಷಕನೊಬ್ಬ ವರದಕ್ಷಿಣೆಗಾಗಿ ಮೂವರು ಯುವತಿಯರ ಜೊತೆ ಮದುವೆ ಆಗಿದ್ದು, ಇದೀಗ ಮೋಸ ಮಾಡಿ ಪರಾರಿಯಾಗಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ಆರೋಪಿಯನ್ನು ಶೀಲಂ ಸುರೇಶ್ ಎಂದು ಗುರುತಿಸಲಾಗಿದೆ. ಈತ ಮೂವರು ಯುವತಿಯರನ್ನು ಮದುವೆಯಾಗಿದ್ದು, ವರದಕ್ಷಿಣೆಗಾಗಿ ಮೋಸ ಮಾಡಿದ್ದಾನೆ. ಇದೀಗ ಎರಡನೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಏನಿದು ಪ್ರಕರಣ?
ವಿಜಯವಾಡದ ಮೂಲದ ಆರೋಪಿ ಸುರೇಶ್ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಈತ 2011ರಲ್ಲಿ ಶಾಂತಿಪ್ರಿಯಾ ಯುವತಿಯನ್ನು ಮದುವೆಯಾಗಿದ್ದನು. ಸ್ವಲ್ಪ ದಿನದ ನಂತರ ಹೆಚ್ಚುವರಿ ವರದಕ್ಷಿಣೆ ತರಲಿಲ್ಲ ಎಂದು ಆಕೆಯನ್ನು ದೂರ ಮಾಡಿದ್ದ. ನಂತರ ಮೊದಲ ಮದುವೆಯ ಬಗ್ಗೆ ಹೇಳದೆ 2015ರಲ್ಲಿ ಶೈಲಜಾ ಜೊತೆ ಎರಡನೇ ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡನೇ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ನಾಲ್ಕು ಲಕ್ಷ ಹಣ ಮತ್ತು ಹತ್ತು ತೊಲ ಚಿನ್ನವನ್ನು ತೆಗೆದುಕೊಂಡಿದ್ದನು. ಆದರೆ ಎರಡನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಆಕೆಯನ್ನು ಬಿಟ್ಟು ಹೋಗಿದ್ದ. ಬಳಿಕ 2019ರಲ್ಲಿ ಮೂರನೇ ಬಾರಿಗೆ ಶಿಕ್ಷಕಿ ಅನುಷಾ ಜೊತೆ ರಹಸ್ಯವಾಗಿ ಮದುವೆಯಾಗಿದ್ದಾನೆ. ಈ ಬಗ್ಗೆ ತಿಳಿದ ಎರಡನೇ ಪತ್ನಿ ಶೈಲಜಾ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ದಿಶಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸುರೇಶ್ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಮೂರು ಮದುವೆಗಳಿಗೆ ಸಹಕರಿಸುತ್ತಿದ್ದ ಸುರೇಶ್ ಪೋಷಕರು, ಹಿರಿಯ ಸಹೋದರನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಬ್ಬ ಯುವತಿಗೆ ಮೋಸ ಮಾಡುವ ಮೊದಲು ಸುರೇಶ್‍ನನ್ನು ಬಂಧಿಸುವಂತೆ ಎರಡನೇ ಪತ್ನಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಈ ಬಗ್ಗೆ ತಿಳಿದ ಮಹಿಳಾ ಸಂಘಗಳು ಎರಡನೇ ಪತ್ನಿ ಶೈಲಜಾ ಬೆಂಬಲಕ್ಕೆ ನಿಂತಿವೆ. ಇತ್ತ ಮೊದಲ ಪತ್ನಿ ಕೂಡ ಕೂಡಲೇ ಆತನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *