ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಗೆ ಮುಂದಾದ ಗೌತಮ್ ಗಂಭೀರ್

Public TV
2 Min Read

– ಮಕ್ಕಳ ಶಾಲೆಯ ಶುಲ್ಕ, ಆಹಾರ, ಔಷಧಿ, ಇತರೆ ವೆಚ್ಚಗಳಿಗೆ ನೆರವು

ನವದೆಹಲಿ: ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಲೈಂಗಿಕ ಕಾರ್ಯಕರ್ತೆಯರ ಮಕ್ಕಳನ್ನು ಆರ್ಥಿಕವಾಗಿ ಪೋಷಣೆ ಮಾಡಲು ಮುಂದಾಗಿದ್ದಾರೆ.

ಹೌದು..ರಾಷ್ಟ್ರ ರಾಜಧಾನಿಯ ಜಿಬಿ ರಸ್ತೆ ಪ್ರದೇಶಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರ 25 ಮಕ್ಕಳ ಪೋಷಣೆಗೆ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಅಂದರೆ 25 ಮಕ್ಕಳ ಶಾಲೆಯ ಶುಲ್ಕ, ಆರೋಗ್ಯ, ಆಹಾರ, ಔಷಧಿ ಮತ್ತು ಇತರ ವಿವಿಧ ವೆಚ್ಚಗಳನ್ನು ಭರಿಸುತ್ತಾರೆ. ಗೌತಮ್ ಗಂಭೀರ್ ತಮ್ಮ ಈ ಕಾರ್ಯಕ್ಕೆ “PANKH” (ರೆಕ್ಕೆಗಳು) ಎಂದು ಕರೆದಿದ್ದಾರೆ.

ಸಂಸದರು ತಮ್ಮ ಗೌತಮ್ ಗಂಭೀರ್ ಫೌಂಡೇಶನ್ (ಜಿಜಿಎಫ್) ಮೂಲಕ ಈ ಮಕ್ಕಳನ್ನು ಪೋಷಣೆ ಮಾಡಲಿದ್ದಾರೆ. “ಸಮಾಜದಲ್ಲಿ ಪ್ರತಿಯೊಬ್ಬರಿಗೂ ಯೋಗ್ಯವಾದ ಜೀವನವನ್ನು ನಡೆಸುವ ಹಕ್ಕಿದೆ. ಅದೇ ರೀತಿ ಈ ಮಕ್ಕಳಿಗೆ ಅವರ ಕನಸಿನಂತೆ ಬದುಕಲು ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ನಾನು ಬಯಸುತ್ತೇನೆ. ಅವರ ಜೀವನ, ಶಿಕ್ಷಣ ಮತ್ತು ಅವರ ಆರೋಗ್ಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಈಗಾಗಲೇ ಗೌತಮ್ ಗಂಭೀರ್ ಫೌಂಡೇಶನ್ ದೇಶ ಸೇವೆ ಮಾಡುವಾಗ ಹುತಾತ್ಮರಾದ 200 ಯೋಧರ ಮಕ್ಕಳನ್ನು ನೋಡಿಕೊಳ್ಳುತ್ತಿದೆ. ಮೊದಲಿಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹತ್ತು ಹುಡುಗಿಯರನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಇನ್ನೂ ಹದಿನೈದು ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.

ನಾವು ಪ್ರಸ್ತುತ ಅಧಿವೇಶನದಲ್ಲಿ ವಿವಿಧ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 10 ಹುಡುಗಿಯರನ್ನು ಆಯ್ಕೆ ಮಾಡಿದ್ದೇವೆ. ಅವರ ಶಾಲಾ ಶುಲ್ಕಗಳು, ಸಮವಸ್ತ್ರ, ಆಹಾರ, ಸಮಾಲೋಚನೆ ಸೇರಿದಂತೆ ವೈದ್ಯಕೀಯ ಸಹಾಯವನ್ನು ನಾವು ಪ್ರಾಯೋಜಿಸುತ್ತೇವೆ. ಇದರಿಂದ ಅವರು ತಮ್ಮ ಕನಸುಗಳನ್ನು ಸಾಧಿಸಲು ಸಹಾಯ ಮಾಡಿದಂತೆ ಆಗುತ್ತದೆ ಎಂದು ಗಂಭೀರ್ ಹೇಳಿದರು.

ಮುಂದಿನ ಅಧಿವೇಶನದಲ್ಲಿ ನಾವು ಹೆಚ್ಚಿನ ಮಕ್ಕಳಿಗೆ ಸಹಾಯ ಮಾಡುತ್ತೇವೆ. ಈ ಯೋಜನೆಯ ಮೂಲಕ ಕನಿಷ್ಠ 25 ಮಕ್ಕಳಿಗೆ ಸಹಾಯ ಮಾಡುವುದು ನನ್ನ ಗುರಿ. 5-18 ವರ್ಷ ವಯಸ್ಸಿನ ಬಾಲಕಿಯರಿಗೆ ಕೌನ್ಸೆಲಿಂಗ್ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದ್ದೇವೆ. ಇದರಿಂದ ಅವರು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಇಂದು ನನ್ನ ಅಜ್ಜಿಯ ಜನ್ಮದಿನ. ಅವರ ಆಶೀರ್ವಾದದಿಂದ ನಾನು ಈ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಇದನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *