ಲಾಠಿ ಬೀಸೋಕು ಸೈ, ಕಷ್ಟದಲ್ಲಿದ್ದವರ ಕೈ ಹಿಡಿಯೋಕು ಸೈ

Public TV
1 Min Read

– ನೋವಿಗೆ ಸ್ಪಂದಿಸಿದ ಯಾದಗಿರಿ ಪೊಲೀಸ್ ಇಲಾಖೆ

ಯಾದಗಿರಿ: ಕೊರೊನಾ ಲಾಕ್‍ಡೌನ್‍ನಲ್ಲಿ ಜನರಿಗೆ ಲಾಠಿ ಬೀಸಿ ಸುದ್ದಿಯಾಗಿದ್ದ ಪೊಲೀಸರು, ಈಗ ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಯಾದಗಿರಿ ನಗರದ ಅಲೆಮಾರಿ ಜನಾಂಗದವರ ನೋವಿಗೆ ಸ್ಪಂದಿಸುವ ಮೂಲಕ ತಪ್ಪು ಮಾಡಿದ್ರೆ, ಲಾಠಿ ಬೀಸೋಕು ಸೈ, ಕಷ್ಟದಲ್ಲಿದ್ದವರ ಕೈ ಹಿಡಿಯೋಕು ಸೈ ಎನ್ನುತ್ತಿದ್ದಾರೆ. ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ನಗರದಲ್ಲಿ ಚಿಂದಿ ಆಯುವ, ಹಗಲುವೇಷ ಹಾಕಿಕೊಂಡು ಮತ್ತು ಕೊಡಗಳನ್ನು ಮಾರಿ ಜೀವನ ನಡೆಸುವ ಕುಟುಂಬಗಳು ತುತ್ತು ಅನ್ನಕ್ಕೆ ಪರದಾಡುವಂತಾಗಿದೆ.

ಅಲೆಮಾರಿ ಜನಾಂಗದವರ ಕಷ್ಟವನ್ನು ಗಮನಿಸಿದ ಯಾದಗಿರಿ ಪೊಲೀಸ್ ಇಲಾಖೆ, ಒಟ್ಟು ನೂರು ಕುಟುಂಬಗಳಿಗೆ 15ದಿನಕ್ಕೆ ಬೇಕಾಗುವ ದಿನಸಿ ಕೊಟ್ಟಿದೆ. ನಗರದ ಹೊರ ವಲಯದಲ್ಲಿನ ಅಲೆ ಮಾರಿ ಕುಟುಂಬಗಳು ವಾಸಿಸುವ ಸ್ಥಳಕ್ಕೆ ತೆರಳಿದ ಎಸ್‍ಪಿ ವೇದಮೂರ್ತಿ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದರು.

ಎಸ್‍ಪಿ ಯವರಿಗೆ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ, ಸಿಪಿಐ ಸೋಮಶೇಖರ್ ಕೆಂಚರೆಡ್ಡಿ ಸಾಥ್ ನೀಡಿದರು. ಕಿಟ್ ವಿತರಣೆ ಬಳಿಕ ಮಾತನಾಡಿದ ಎಸ್‍ಪಿ ವೇದಮೂರ್ತಿ ಈ ಸಮಯದಲ್ಲಿ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಈಗ ಜೀವನಕ್ಕಿಂತ ಜೀವ ಮುಖ್ಯ ಲಾಕ್‍ಡೌನ್ ಸಮಯದಲ್ಲಿ, ನೀವು ಮನೆಯೇ ಇರಿ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *