ಲಾಕ್‍ಡೌನ್ 4.O – 8 ದಿನಕ್ಕೆ ದೇಶದಲ್ಲಿ ಅರ್ಧ ಲಕ್ಷ ಸೋಂಕಿತರು

Public TV
2 Min Read

ನವದೆಹಲಿ: ಮೂರು ಹಂತದ ಸುದೀರ್ಘ ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದ ದೇಶದ ಆರ್ಥಿಕತೆಗೆ ಮುಕ್ತಿ ನೀಡಲು ವಿನಾಯಿತಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ. ಮೇ 18 ರಿಂದ ಶುರುವಾದ ಭಾಗಶಃ ವಿನಾಯಿತಿ ಲಾಕ್‍ಡೌನ್‍ನಿಂದ ಇಡೀ ದೇಶದಲ್ಲಿ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

ನಾಲ್ಕನೇ ಹಂತದ ಲಾಕ್‍ಡೌನ್ ಘೋಷಣೆಯಾಗಿ ಸೋಮವಾರಕ್ಕೆ ಎಂಟು ದಿನಗಳು ಕಳೆದಿದೆ. ಈ ಎಂಟು ದಿನಗಳಲ್ಲಿ ಅಂತರ ರಾಜ್ಯಗಳ ಗಡಿ ಓಪನ್ ಮಾಡಿ ಬಸ್, ಟ್ರೈನ್ ಸಂಚಾರ ಆರಂಭಿಸಿದೆ. ಹೀಗೆ ಸಂಚಾರ ಆರಂಭವಾಗುತ್ತಿದ್ದಂತೆ, ಪ್ರಯಾಣಿಕರ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಇದು ದೇಶದಲ್ಲಿ ಕೊರೊನಾ ಸೋಂಕು ಏರಿಕೆಗೆ ಕಾರಣವಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ ಎಂಟು ದಿನಗಳಲ್ಲಿ 47,918 ಪ್ರಕರಣಗಳು ಪತ್ತೆಯಾಗಿದೆ. ಹಿಂದಿನ ಮೂರು ಲಾಕ್‍ಡೌನ್ ಅವಧಿಯಲ್ಲಿ ಎಂಟು ದಿನಗಳಲ್ಲಿ ಇಷ್ಟು ಪ್ರಕರಣ ದಾಖಲಾಗಿದ್ದ ಉದಾಹರಣೆಗಳಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಮಹಾರಾಷ್ಟ್ರದಲ್ಲಿ 16,474, ತಮಿಳುನಾಡಿನಲ್ಲಿ 5,771, ದೆಹಲಿಯಲ್ಲಿ 3,500, ಗುಜರಾತ್‍ನಲ್ಲಿ 3,071, ಮಧ್ಯಪ್ರದೇಶದಲ್ಲಿ 1,885, ರಾಜಸ್ಥಾನದಲ್ಲಿ 2,084 ಕರ್ನಾಟಕದಲ್ಲಿ 1,035 ಸೋಂಕು ಎಂಟೇ ದಿನದಲ್ಲಿ ದಾಖಲಾಗಿದೆ. ಕಳೆದ ಎಂಟು ದಿನಗಳಲ್ಲಿ ಏಳು ರಾಜ್ಯಗಳಲ್ಲಿ ಒಟ್ಟು 32,785 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ, ಬಾಕಿ ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಟು ದಿನಕ್ಕೆ 14,098 ಹೊಸ ಪ್ರಕರಣಗಳು ಪತ್ತೆಯಾಗಿದೆ.

14 ದಿನಗಳ ಲಾಕ್‍ಡೌನ್ ಪೈಕಿ ಇನ್ನೂ ಆರು ದಿನಗಳು ಬಾಕಿ ಉಳಿದುಕೊಂಡಿದೆ. ಸದ್ಯ ಪ್ರತಿದಿನ ಸುಮಾರು 6,000 ಪ್ರಕರಣಗಳು ಪತ್ತೆಯಾಗುತ್ತಿದ್ದು, ಮೇ ಅಂತ್ಯಕ್ಕೆ 30 ಸಾವಿರ ಪ್ರಕರಣಗಳು ಆಗಬಹುದು ಎನ್ನಲಾಗಿದೆ. ಅಲ್ಲಿಗೆ ನಾಲ್ಕನೇ ಲಾಕ್‍ಡೌನ್ ಅವಧಿಯಲ್ಲಿ ಬಹುತೇಕ 80 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಅಂದಾಜು ಮಾಡಿದೆ.

ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಎಂಟು ದಿನದಲ್ಲಿ 1,035 ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿ ನಿತ್ಯ ಸರಾಸರಿ 130 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂದಿನ ಆರು ದಿನಗಳಲ್ಲಿ ಬರೋಬ್ಬರಿ 780 ಅಥವಾ ಅದಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಬಹುದು. ಲಾಕ್‍ಡೌನ್ ವಿನಾಯಿತಿ ನೀಡಿದ ಬೆನ್ನಲ್ಲೇ ಹೀಗೆ ಸೋಂಕು ಗಗನಕ್ಕೇರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *