ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಜಾರಿಗೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನಾಭಿಪ್ರಾಯ ಪಡೆಯುತ್ತಿದ್ದು, ಲಾಕ್‍ಡೌನ್ ವಿನಾಯತಿ ಸಂಬಂಧ ಸಾರ್ವಜನಿಕರಿಂದ ಸಲಹೆ ಪಡೆದು ಅನುಷ್ಠಾನಕ್ಕೆ ತರುವ ಪ್ರಯತ್ನ ಆರಂಭಿಸಿದ್ದಾರೆ.
ಈ ಸಂಬಂಧ ದೆಹಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದ್ದು, ಈವರೆಗೂ ಆನ್‍ಲೈನ್ ಮೂಲಕ ಐದು ಲಕ್ಷ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವೇಳೆ ಮನೆಯಿಂದ ಹೊರ ಬರುವ ಜನರು ಮಾಸ್ಕ್ ಧರಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಕಡ್ಡಾಯಗೊಳಿಸಲು ಹೆಚ್ಚಿನ ಪ್ರಮಾಣದ ಸಲಹೆ ನೀಡಿದ್ದಾರೆ ಎಂದರು.
ಶಾಲೆ ಕಾಲೇಜು, ಸ್ಪಾ, ಸಲೂನ್, ಸ್ವಿಮೀಂಗ್ ಪೂಲ್, ಮಾಲ್‍ಗಳನ್ನು ಬಂದ್ ಮುಂದುವರಿಸಲು ಜನರು ಮನವಿ ಮಾಡಿದ್ದಾರೆ ಎಂದರು. ಹೋಟೆಲ್‍ಗಳು ಬಂದ್ ಕೂಡ ಮುಂದುವರಿಯಲಿ. ಆದರೆ ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಮಾತ್ರ ಅವಕಾಶ ನೀಡುವಂತೆ ದೆಹಲಿ ಜನರು ಕೇಳಿಕೊಂಡಿದ್ದಾರಂತೆ. ದೆಹಲಿಯಲ್ಲಿ ಸಮ ಬೆಸ ಮಾದರಿಯಲ್ಲಿ ಮಾರ್ಕೇಟ್‍ಗಳನ್ನು ತೆರೆಯಲು ಕೆಲವು ಜನರು ಮನವಿ ಮಾಡಿದ್ದಾರೆ.
ನಾಲ್ಕನೇ ಹಂತದ ಲಾಕ್‍ಡೌನ್ ವಿನಾಯತಿಯಲ್ಲಿ ಹಲವು ಕಚೇರಿಗಳು, ಅಂಗಡಿಗಳು ತೆರವುಗೊಂಡಿದ್ದು, ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಯತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಬಸ್, ಮೆಟ್ರೊ ಸಂಚಾರ ಆರಂಭಿಸಲು ದೆಹಲಿ ಜನರು ಮನವಿ ಮಾಡಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಈ ಸಲಹೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಜೊತೆಗೆ ಕೇಂದ್ರದ ಮಾರ್ಗಸೂಚಿಗಳ ಜೊತೆಗೆ ರಾಜ್ಯ ಸರ್ಕಾರ ಹಲವು ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣಿಸುವುದಾಗಿ ಹೇಳಿದ್ದಾರೆ.

 
			

 
		 
		 
                                
                              
		