ಲಾಕ್‍ಡೌನ್ ನಿಯಮದಿಂದ ಬಸ್‍ನಲ್ಲಿ ಕಳೆದುಕೊಂಡಿದ್ದ 10 ಸಾವಿರ ರೂ. ಸಿಕ್ತು

Public TV
1 Min Read

– ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10 ಸಾವಿರ ರೂ.ಗಳನ್ನು ಹಿಂದಿರುಗಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.

ಹುಬ್ಬಳ್ಳಿ ವಿಭಾಗದ ಗ್ರಾಮಾಂತರ ಒಂದನೇ ಘಟಕದ ಕೆಎ-25 ಎಫ್ 2966 ಸಂಖ್ಯೆಯ ಬಸ್ ಇಲಕಲ್ ನಿಂದ ಹುಬ್ಬಳ್ಳಿಗೆ ಬರುವಾಗ ಕುಳಗೇರಿ ಕ್ರಾಸ್ ನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರೊಬ್ಬರು 10 ಸಾವಿರ ರೂ.ಗಳಿರುವ ಪರ್ಸನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು. ಇದನ್ನು ಮರಳಿ ಮಾಲೀಕರಿಗೆ ತಲುಪಿಸಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಬಸ್‍ನಲ್ಲಿ ಪ್ರಯಾಣಿಸುವವರು ಹೆಸರು, ದೂರವಾಣಿ ಸಂಖ್ಯೆ ಹಾಗೂ ಪ್ರಯಾಣದ ಸ್ಥಳಗಳನ್ನು ನಮೂದಿಸುವುದು ಕಡ್ಡಾಯವಾಗಿದೆ. ಇದೇ ಮಾಹಿತಿ ಆಧಾರದ ಮೇಲೆ ಬಸ್ ಚಾಲಕ ಆರ್.ಎನ್.ಮಾಳವಾಡ ಮತ್ತು ನಿರ್ವಾಹಕ ಆರ್.ಡಿ.ದೇಗಾಂವಕರ್ ಬಸ್ ನಲ್ಲಿ ಪರ್ಸ್ ಸಿಕ್ಕಿರುವ ಆಸನದಲ್ಲಿ ಕುಳಿತು ಪ್ರಯಾಣಿಸಿದ ಪ್ರಯಾಣಿಕರನ್ನು ಹುಬ್ಬಳ್ಳಿಯ ನಿವಾಸಿ ಸಂತೋಷ್ ಎಂದು ಪತ್ತೆ ಮಾಡಿದ್ದಾರೆ.

ನಂತರ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿ ಘಟಕಕ್ಕೆ ಕರೆಸಿಕೊಂಡು ಮೇಲಾಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸಿ, ಖಚಿತಪಡಿಸಿಕೊಂಡು ಹಣವಿದ್ದ ಪರ್ಸ್ ನ್ನು ಹಸ್ತಾಂತರಿಸಿದ್ದಾರೆ. ಹಣ ಮರಳಿ ಪಡೆದ ಪ್ರಯಾಣಿಕ ಸಂತೋಷ್ ಚಾಲಕ, ನಿರ್ವಾಹಕರಿಗೆ ಕೃತಜ್ಞತೆ ತಿಳಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಮಾಣಿಕತೆ ಮೆರೆದ ಚಾಲಕ, ನಿರ್ವಾಹಕರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ಅಭಿನಂದಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *