ಲಾಕ್‍ಡೌನ್ ಎಫೆಕ್ಟ್- ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು 9 ಮಂದಿ ದುರ್ಮರಣ!

Public TV
2 Min Read

ಹೈದರಾಬಾದ್: ಕೊರೊನಾ ಭೀತಿಯಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಈ ಲಾಕ್‍ಡೌನ್ ವೇಳೆ ಕುಡಿಯಲು ಆಲ್ಕೋಹಾಲ್ ಸಿಗದೆ ಅನೇಕ ಮಂದಿ ಮದ್ಯವ್ಯಸನಿಗಳು ಪರದಾಡಿದ್ದಾರೆ. ಇದೇ ರೀತಿ ಮದ್ಯಪಾನ ಇಲ್ಲದೆ ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರನ್ನೇ ಕುಡಿದು ಸುಮಾರು 9 ಮಂದಿ ಮೃತಪಟ್ಟ ದುರಂತ ಘಟನೆ ಆಂಧ್ರಪ್ರದೇಶದ ಪ್ರಕಾಶನ್ ಜಿಲ್ಲೆಯ ಕುರಿಚೆಡು ಪಟ್ಟಣದಲ್ಲಿ ನಡೆದಿದೆ.

ಬುಧವಾರ ಮಧ್ಯರಾತ್ರಿ ಓರ್ವ ಮೃತಪಟ್ಟರೆ, ಮತ್ತಿಬ್ಬರು ಗುರುವಾರ ರಾತ್ರಿ ಹಾಗೂ ಉಳಿದ 6 ಮಂದಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಭಿಕ್ಷುಕರು ಆಗಿದ್ದು, ಉಳಿದವರನ್ನು ಸ್ಥಳೀಯ ಸ್ಲಂ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಸುಮಾರು 20 ಮಂದಿ ಸ್ಯಾನಿಟೈಸರ್ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಮೃತರನ್ನು ಅನುಗೊಂಡ ಸ್ರೀನು(25), ಭೋಗೆಮ್ ತಿರುಪತಯ್ಯ(35), ಗುಂಟಕ ರಮಿ ರೆಡ್ಡಿ(60), ಕದಿಯಾಮ್ ರಾಮನಯ್ಯ(28), ರಾಜ ರೆಡ್ಡಿ(65), ರಾಮನಯ್ಯ(65), ಬಾಬು(40), ಚಾರ್ಲೆಸ್(45) ಹಾಗೂ ಅಗಸ್ಟಿನ್(45) ಎಂದು ಗುರುತಿಸಲಾಗಿದೆ.

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಒತ್ತಾಯಪೂರ್ವಕವಾಗಿ ಕುರಿಚೆಡುನಲ್ಲಿ ಲಾಕ್‍ಡೌನ್ ಹೇರಲಾಗಿತ್ತು. ಹೀಗಾಗಿ ಮದ್ಯದಂಗಡಿಗಳು ಬಂದ್ ಆದ ಪರಿಣಾಮ ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಸಿದ್ಧಾರ್ಥ್ ಕೌಶಲ್ ತಿಳಿಸಿದ್ದಾರೆ.

ಸ್ಥಳೀಯ ದುರ್ಗಾ ದೇವಾಲಯದಲ್ಲಿದ್ದ ಭಿಕ್ಷಕನೊಬ್ಬನಿಂದ ಇದು ಪ್ರಾರಂಭವಾಯಿತು. ಆತ ತನ್ನ ಹೊಟ್ಟೆ ವಿಪರೀತವಾಗಿ ಉರಿಯುತ್ತಿದೆ ಎಂದು ಗೋಗರೆಯುತ್ತಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬುಧವಾರ ರಾತ್ರಿಯೇ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ಯುತ್ತಿರುವಾಗ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ಅವರು ತಿಳಿಸಿದರು.

ಆ ನಂತರ ಅಂದರೆ ಗುರುವಾರ ಬೆಳಗ್ಗೆ ಮತ್ತಿಬ್ಬರು ಹೊಟ್ಟೆನೋವಿನಿಂದ ಪರದಾಡುತ್ತಿದ್ದರು. ಕೂಡಲೇ ಅವರನ್ನು ಅವರ ಕುಟುಂಬಸ್ಥರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರಿಬ್ಬರೂ ಅಂದೇ ರಾತ್ರಿ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಕೂಡ ಇಂತದ್ದೇ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಘಟನೆಯಿಂದ ಎಚ್ಚೆತ್ತ ಪೊಲೀಸರು, ಸ್ಥಳೀಯ ಅಂಗಡಿಗಳಿಗೆ ದಾಳಿ ಮಾಡಿ ಲ್ಯಾಬ್ ಟೆಸ್ಟ್ ಗೆ ಸ್ಯಾನಿಟೈಸರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತರು ಬರೀ ಸಾನಿಟೈಸರ್ ಮಾತ್ರ ಕುಡಿದಿದ್ದಾರೋ ಅಥವಾ ಅದಕ್ಕೆ ಬೇರೆ ಏನಾದರೂ ಸೇರಿಸಿ ಕುಡಿದಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಕೌಶಲ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *