ಲಾಕ್‍ಡೌನ್ ಎಫೆಕ್ಟ್- ಕಲ್ಲಂಗಡಿಯಿಂದ ಬೆಲ್ಲ ತಯಾರಿಸಿ ರೈತನ ಹೊಸ ಆವಿಷ್ಕಾರ

Public TV
2 Min Read

ಶಿವಮೊಗ್ಗ: ಕೊರೊನಾ ಮಹಾಮಾರಿಗೆ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಅದರಲ್ಲಿಯೂ ರೈತರ ಸ್ಥಿತಿಯಂತೂ ಹೇಳತೀರದಾಗಿ. ಲಾಕ್‍ಡೌನ್ ಪರಿಣಾಮ ಹಣ್ಣು, ತರಕಾರಿ ಬೆಳೆಗಾರರು ಕಂಗಾಲಾಗಿದ್ದಾರೆ. ಹಲವು ರೈತರು ಕಲ್ಲಂಗಡಿ, ಟೊಮ್ಯಾಟೋ, ಅನಾನಸ್ ಸೇರಿದಂತೆ ವಿವಿಧ ರೀತಿಯ ಹಣ್ಣು, ತರಕಾರಿಗಳು ಮಾರಾಟವಾಗದ್ದಕ್ಕೆ ಹೊಲದಲ್ಲೇ ನಾಶಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಲ್ಲೊಬ್ಬ ರೈತ ಕಲ್ಲಂಗಡಿಯಿಂದ ಬೆಲ್ಲ ತಯಾರಿಸುವ ಮೂಲಕ ಹೊಸ ಆವಿಷ್ಕಾರ ಮಾಡಿದ್ದಾರೆ.

ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಸಂಪದಮನೆ ಜಯರಾಮ ಶೆಟ್ಟಿ ಅವರೇ ವಿನೂತನ ಉದ್ಯಮಕ್ಕೆ ನಾಂದಿ ಹಾಡಿದ ರೈತ. ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಭಾರೀ ಪ್ರಮಾಣದ ಕಲ್ಲಂಗಡಿ ಹಣ್ಣುಗಳನ್ನು ನಾಶವಾಗಲು ಬಿಡದೆ, ಅದರಿಂದಲೇ ಬೆಲ್ಲ ತಯಾರಿಸಿ ಆರ್ಥಿಕ ನಷ್ಟದಿಂದ ಪಾರಾಗುವ ದಾರಿ ಕಂಡುಕೊಂಡಿದ್ದಾರೆ. ಈ ಮೂಲಕ ಲಾಕ್‍ಡೌನ್ ಹಿನ್ನೆಲೆ ಎಲ್ಲಿಯೂ ರಫ್ತು ಮಾಡಲಾಗದೇ, ಬೆಳೆದಿರುವ ಹಣ್ಣನ್ನು ಕೊಳೆಯಲು ಬಿಟ್ಟು ನಷ್ಟ ಅನುಭವಿಸುವ ಬದಲು, ಅದರಿಂದಲೇ ಬೆಲ್ಲ ತಯಾರಿಸಿ, ಸದ್ಬಳಕೆ ಮಾಡಿಕೊಂಡಿದ್ದಾರೆ.

ದೇಶದೆಲ್ಲೆಡೆ ಕೊರೊನಾ ಮಹಾಮಾರಿಯ ಕಾಟದಿಂದಾಗಿ ಎಲ್ಲರೂ ನಲುಗಿ ಹೋಗಿದ್ದಾರೆ. ಲಾಕ್‍ಡೌನ್ ನಿಂದಾಗಿ ಕೆಲಸ ಕಾರ್ಯವಿಲ್ಲದೇ, ದಿನದ ದುಡಿಮೆ ಇಲ್ಲದೆ, ಮನೆ ಸೇರಿಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ಈ ಲಾಕ್‍ಡೌನ್ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಹೊಸ ಅನ್ವೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಂತಹದ್ದೇ ಹೊಸ ಆವಿಷ್ಕಾರವನ್ನು ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲೀಗ ಮಾಡಲಾಗಿದೆ.

ಜಯರಾಮ ಶೆಟ್ಟಿಯವರು ತಮ್ಮ 8 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದು, ಬೆಳೆ ಕೈಗೆ ಬರುವಷ್ಟರಲ್ಲಿ ಕೊರೊನಾ ಲಾಕ್‍ಡೌನ್ ಘೋಷಣೆಯಾಗಿದೆ. ಸುಮಾರು 15 ಟನ್ ಹಣ್ಣು ಕೊಳೆಯುತ್ತದೆ. ಲಾಭದ ಮಾತಿರಲಿ, ಬೆಳೆಯಲು ಮಾಡಿದ ಖರ್ಚು ಸಹ ಸಿಗುವುದಿಲ್ಲ ಎಂಬ ಚಿಂತೆಯ ನಡುವೆ ಬೆಲ್ಲ ತಯಾರಿಸುವ ಯೋಚನೆ ಅವರಿಗೆ ಹೊಳೆದಿದೆ. ತಮ್ಮ ಆಪ್ತರನ್ನೇ ಬಳಸಿಕೊಂಡು ಶ್ರಮವಹಿಸಿ ಕಲ್ಲಂಗಡಿಯಲ್ಲಿ ಬೆಲ್ಲ ತಯಾರಿಸಿದ್ದಾರೆ. ತಲಾ 1 ಟನ್ ಕಲ್ಲಂಗಡಿ ಹಣ್ಣಿನಿಂದ 60 ರಿಂದ 65 ಕೆ.ಜಿ. ಜೋನಿ ಬೆಲ್ಲ ತೆಗೆದು ಸೈ ಎನಿಸಿಕೊಂಡಿದ್ದಾರೆ. ಅಷ್ಟು ಬೆಲ್ಲಕ್ಕೆ ಇಂದಿನ ಮಾರುಕಟ್ಟೆಯಲ್ಲಿ ಸುಮಾರು 5 ಸಾವಿರ ರೂ. ಇದೆ.

ಒಂದು ಟನ್ ಕಲ್ಲಂಗಡಿಯಿಂದ 700ಲೀ. ಜ್ಯೂಸ್ ಕೈಗೆ ದೊರೆಯುತ್ತದೆ. ಇದನ್ನು ಎರಡು ಬಾರಿ ಸೋಸಿ ಕೊಪ್ಪರಿಗೆ ಹಾಕಿ, 4 ರಿಂದ 5 ಗಂಟೆ ಕುದಿಸಿದರೆ, ಬೆಲ್ಲ ಸಿದ್ಧವಾಗುತ್ತಿದ್ದು, ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಬೇಡಿಕೆ ಕುಸಿದು ನಷ್ಟಕ್ಕೀಡಾಗುತ್ತಿರುವ ಕಲ್ಲಂಗಡಿ ಹಣ್ಣುಗಳನ್ನು ಬಳಸಿಕೊಂಡು ಅದರಲ್ಲಿ ಬೆಲ್ಲ ತಯಾರಿಸಲಾಗುತ್ತಿದೆ. ಈ ಮೂಲಕ ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *