ಲಾಕ್‍ಡೌನ್ ಎಫೆಕ್ಟ್: ಅಕ್ಷಯ್ ಜೊತೆ ನಟಿಸಿದ್ದ ಬಾಲಿವುಡ್ ನಟನಿಂದ ತರಕಾರಿ ಮಾರಾಟ!

Public TV
1 Min Read

ಮುಂಬೈ: ಮಹಾಮಾರಿ ಕೊರೊನಾ ಘಟಾನುಘಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಸಂಕಷ್ಟಕ್ಕೀಡು ಮಾಡಿದೆ. ಹಲವು ಮಂದಿ ಬಡವರ ಬದುಕನ್ನೇ ಕಸಿದುಕೊಂಡಿದೆ. ಅಂತೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದ ನಟನೊಬ್ಬ ತನ್ನ ಬದುಕಿನ ಬಂಡಿ ದೂಡಲು ತರಕಾರಿ ಮಾರಾಟದತ್ತ ಮುಖಮಾಡಿದ್ದಾರೆ.

ಹೌದು. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿಯಲ್ಲಿ ನಟಿಸಿದ್ದ ಕಾರ್ತಿಕ ಸಾಹೋ ಅವರೇ ತರಕಾರಿ ಮಾರುತ್ತಾ ಜೀವನ ನಡೆಸುವ ನಟರಾಗಿದ್ದಾರೆ. ಮೂಲತಃ ಒಡಿಶಾದ ಕೇಂದ್ರಪದ ಜಿಲ್ಲೆಯ ಗರದ್ಪುರ ಬ್ಲಾಕ್ ನಿವಾಸಿಯಾಗಿರುವ ಸಾಹೋ, ತನ್ನ 17ನೇ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಡಬೇಕೆಂಬ ಆಸೆಯಿಂದ ಮುಂಬೈಗೆ ಬಂದಿದ್ದರು. ಆದರೆ ಸುಮಾರು ವರ್ಷಗಳ ಕಾಲ ಅಮಿತಾ ಬಚ್ಚನ್, ಸಚಿನ್ ತೆಂಡೂಲ್ಕರ್ ಮೊದಲಾದ ಸಿನಿಮಾ ಹಾಗೂ ಕ್ರಿಕೆಟ್ ಸ್ಟಾರ್ ಗಳ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದರು.

2018ರ ಬಳಿಕ ಸಾಹೋ ಅವರ ಅದೃಷ್ಟ ಖುಲಾಯಿಸಿದ್ದು, ಅನೇಕ ಆ್ಯಕ್ಷನ್ ಸಿನಿಮಾಗಳಲ್ಲಿ ನಟನೆ ಮಾಡುವಂತಹ ಅವಕಾಶ ಸಿಕ್ಕಿತ್ತು. ಅಲ್ಲದೆ ಬಿಡುಗಡೆಗೆ ಸಿದ್ಧವಾಗಿರುವ ಸೂರ್ಯವಂಶಿಯಲ್ಲಿ ಕೂಡ ನಟ ಅಕ್ಷಯ್ ಕುಮಾರ್ ಜೊತೆ ಫೈಟ್ ಸೀನ್ ನಲ್ಲಿ ಸಾಹೋ ಕಾಣಿಸಿಕೊಂಡಿದ್ದಾರೆ.

ಜೈಪುರದಲ್ಲಿ ನಡೆದ ಶೂಟಿಂಗ್ ಬಳಿಕ ಮಾರ್ಚ್ 22 ಅಂದರೆ ಲಾಕ್‍ಡೌನ್ ಗಿಂತಲೂ ಮುಂಚೆಯೇ ಸಾಹೋ ಅವರು ತಮ್ಮ ತಾಯ್ನಾಡಿಗೆ ತೆರಳಿದ್ದಾರೆ. ಆ ಬಳಿಕದಿಂದ ಕೆಲಸವಿಲ್ಲದೆ ಕುಟುಂಬದ ಬಂಡಿ ದೂಡಲು ಕಷ್ಟವಾಗಿದೆ. 4 ತಿಂಗಳು ಕೆಲಸವಿಲ್ಲದೆ ಸಾಹೋ ಕೈ ಬರಿದಾಗಿತ್ತು.

ಇತ್ತ ಕೆಲಸಕ್ಕಾಗಿ ಸಾಹೋ ರಾಜಧಾನಿ ಭುವನೇಶ್ವರಕ್ಕೆ ತೆರಳಿದರು. ಆದರೆ ಅಲ್ಲಿ ಎಲ್ಲಿಯೂ ಸಾಹೋಗೆ ಕೆಲಸ ಸಿಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ನಟ ತರಕಾರಿ ಮಾರಾಟ ಮಾಡುವತ್ತ ಮುಖ ಮಾಡಿದರು. ಇಷ್ಟೆಲ್ಲಾ ಆದರೂ ಭರವಸೆ ಕಳೆದುಕೊಳ್ಳದ ಸಾಹೋ, ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ನಾನು ಮತ್ತೆ ಬಾಲಿವುಡ್ ನಲ್ಲಿ ನನ್ನ ಅದೃಷ್ಟ ಖುಲಾಯಿಸಿಕೊಳ್ಳುತ್ತೇನೆ. ಅಲ್ಲಿಯವರೆಗೆ ಬದುಕುಳಿಯಲು ಇತರರಂತೆ ಹೋರಾಡುವುದಾಗಿ ಸಾಹೋ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *