ಲಾಕ್‍ಡೌನ್‍ನಿಂದ 29 ಲಕ್ಷ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಿದ್ದೇವೆ: ಕೇಂದ್ರ ಮಾಹಿತಿ

Public TV
2 Min Read

ನವದೆಹಲಿ: ಕೊರೊನಾ ವೈರಸ್ ಆರಂಭದಲ್ಲೇ ದೇಶದಾದ್ಯಂತ ಲಾಕ್‍ಡೌನ್ ವಿಧಿಸಿದ್ದ ಕಾರಣ ಎದುರಿಸಬಹುದಾಗಿದ್ದ ಅತಿದೊಡ್ಡ ಸಂಕಷ್ಟವನ್ನು ತಪ್ಪಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಲಾಕ್‍ಡೌನ್ ಮಾಡಿದ್ದರಿಂದ ಸಾಕಷ್ಟು ಪ್ರಯೋಜನವಾಗಿದೆ. ದೇಶದಲ್ಲಿ ಸುಮಾರು 29 ಲಕ್ಷ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಿದ್ದೇವೆ. ಈ ವಿಚಾರದಲ್ಲಿ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತೇನೆ. ಸರ್ಕಾರದ ಈ ನಿಟ್ಟನಲ್ಲಿ ದಿಟ್ಟ ನಿರ್ಧಾರವನ್ನು ಕೈಗೊಂಡಿತ್ತು. ಈ ನಿರ್ಣಯದಿಂದ 14 ರಿಂದ 29 ಲಕ್ಷದವರೆಗೂ ಕೊರೊನಾ ಪ್ರಕರಣ, 37 ರಿಂದ 78 ಸಾವಿರ ಸಾವುಗಳನ್ನು ನಿಯಂತ್ರಿಸಿದ್ದೇವೆ ಎಂದು ಸಚಿವರು ಸಂಸತ್‍ನಲ್ಲಿ ಮಾಹಿತಿ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಟೆಸ್ಟ್ ಗಳನ್ನು ಮಾಡುತ್ತಿದ್ದೇವೆ. ದೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದ್ದೇವೆ. ಇದುವರೆಗೂ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಿಗೆ 1 ಲಕ್ಷಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುತ್ತಿದ್ದೇವೆ. ಸದ್ಯ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ, ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ವಿಶ್ವದಲ್ಲೇ ಹೆಚ್ಚು ಕೊರೊನಾ ಪ್ರಕರಣ ದಾಖಲಾದ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ. ಕಳೆದ ವಾರ ಬ್ರೆಜಿಲ್ ದೇಶವನ್ನು ಹಿಂದಿಕ್ಕಿದ್ದ ಭಾರತ ಅಮೆರಿಕದ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಸೆಪ್ಟೆಂಬರ್ ಮೊದಲ ವಾರದಿಂದ ದೇಶದಲ್ಲಿ 1 ಲಕ್ಷದ ಆಸುಪಾಸಿನಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 92,071 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 1,136 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವನ್ನಪ್ಪಿರ ಸಂಖ್ಯೆ 79,722ಕ್ಕೇರಿದ್ದು, ಸೋಂಕಿತರ ಸಂಖ್ಯೆ 48 ಲಕ್ಷ ಗಡಿದಾಟಿದೆ. ಇದನ್ನೂ ಓದಿ: 24 ಗಂಟೆಯಲ್ಲಿ 92,071 ಮಂದಿಗೆ ಕೊರೊನಾ- ಶೇ.78 ಗುಣಮುಖ ಪ್ರಮಾಣ

Share This Article
Leave a Comment

Leave a Reply

Your email address will not be published. Required fields are marked *