– ಫೋಸ್ಟ್ ಪ್ರೊಡಕ್ಷನ್‍ಗೂ ಅವಕಾಶ ನೀಡಿದ ಸರ್ಕಾರ
ಬೆಂಗಳೂರು: ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ಸಿನಿಮಾ ಶೂಟಿಂಗ್ ಮತ್ತು ಟಿವಿ ಕಾರ್ಯಕ್ರಮ ಹಾಗೂ ಧಾರವಾಹಿ ಶೂಟಿಂಗ್ ಮಾಡಲು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ದೇಶದಲ್ಲಿ ಕೊರೊನಾ ವೈರಸ್ ಭೀತಿ ಜಾಸ್ತಿಯಾದ ಕಾರಣ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಹೀಗಾಗಿ ಶೂಟಿಂಗ್ ಕೆಸಲವೆಲ್ಲ ನಿಂತು ಹೋಗಿ ನಟ-ನಟಿಯರು ಮನೆಯಲ್ಲೇ ಇದ್ದರು. ನಂತರ ಲಾಕ್‍ಡೌನ್ ಸಡಿಲಿಕೆ ಮಾಡಿದರೂ ಚಿತ್ರೀಕರಣ ಮಾಡಲು ಅನುಮತಿ ನೀಡಿರಲಿಲ್ಲ. ಸ್ವಲ್ಪ ದಿನ ಬಿಟ್ಟು ಒಳಾಂಗಣ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು.
ಈಗ ಸಂಪೂರ್ಣವಾಗಿ ಶೂಟಿಂಗ್ ಮಾಡಲು ಅನುಮತಿ ನೀಡಿರುವ ಸರ್ಕಾರ, ಫೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಅವಕಾಶ ನೀಡಿ ಆದೇಶ ಹೊರಡಿಸಿದೆ. ಲಾಕ್‍ಡೌನ್ ಕಾರಣದಿಂದ ಈಗಾಗಲೇ ಅರ್ಧದಲ್ಲಿಯೇ ಸ್ಥಗಿತಗೊಂಡ ಎಲ್ಲ ಚಲನಚಿತ್ರ ಹಾಗೂ ಟಿವಿ ಕೆಲಸಗಳು ಮುಂದುವರಿಸಲು ಅನುಮತಿ ನೀಡಿದೆ. ಜೊತೆಗೆ ಚಿತ್ರೀಕರಣ ಪೂರ್ಣಗೊಳಿಸಿದ ನಂತರ ಫೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿಕೊಳ್ಳಲು ತಿಳಿಸಿದೆ.
ಸಿಸಿಮಾ ಚಿತ್ರೀರಕಣವಾಗಲಿ ಹಾಗೂ ಟಿವಿ ಕಾರ್ಯಕ್ರಮದ ಶೂಟಿಂಗ್ ಆಗಲಿ, ಅಲ್ಲಿ ಕೋವಿಡ್-19 ಸಂಬಂಧ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರಡಿಸಿರುವ ಪ್ರಮಾಣಿಕ ಕಾರ್ಯವಿಧಾನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಷರತ್ತುಗಳನ್ನು ಗಮನದಲ್ಲಿ ಇಟ್ಟುಕೊಂಡು ಶೂಟಿಂಗ್ ಆರಂಭ ಮಾಡಲು ಸರ್ಕಾರ ತಿಳಿಸಿದೆ.
ಶೂಟಿಂಗ್ ಕಾರ್ಯಕ್ರಮಗಳು ನಿಂತು ಹೋದ ಬಳಿಕ ಅಲ್ಲಿ ಕೆಲಸ ಮಾಡುವ ನೌಕರರ ವರ್ಗ ಸಖತ್ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೆಲ ನಟ-ನಟಿಯರು ಅವರಿಗೆ ಸಹಾಯ ಮಾಡಿದ್ದರು. ಜೊತೆಗೆ ಹಲವು ಬಾರಿ ಶೂಟಿಂಗ್ ಆರಂಭಿಸುವಂತೆ ಕಾರ್ಮಿಕರು ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು. ಈಗ ಮತ್ತೆ ಶೂಟಿಂಗ್ ಆರಂಭವಾಗಿರುವುದಕ್ಕೆ ಕಾರ್ಮಿಕ ವರ್ಗ ಸಂತಸ ವ್ಯಕ್ತಪಡಿಸಿದೆ.