ಲಾಕ್‍ಡೌನ್‍ನಿಂದ ಇನ್ನೂ ತೆರವಾಗಿಲ್ಲ ಟಿಬೆಟ್ ಕ್ಯಾಂಪ್

Public TV
1 Min Read

ಮಡಿಕೇರಿ: ಕಳೆದೊಂದು ವರ್ಷದಿಂದ ಇಡೀ ವಿಶ್ವವನ್ನೇ ಹೈರಣಾಗಿಸಿದ್ದ ಮಹಾಮಾರಿ ಕೊರೊನಾ ವೈರಸ್ ಅಬ್ಬರ ಕ್ರಮೇಣ ಕಮ್ಮಿಯಾಗ್ತಾ ಬರುತ್ತಿದೆ. ಲಾಕ್‍ಡೌನ್, ಸೋಶಿಯಲ್ ಡಿಸ್ಟೆನ್ಸ್‍ನಿಂದಾಗಿ ಬೇಸತ್ತಿದ್ದ ದೇಶದ ಜನತೆ ಮತ್ತೆ ಸಹಜ ಸ್ಥಿತಿಗೆ ವಾಪಸ್ಸಾಗ್ತಾ ಇದ್ದಾರೆ. ಆದರೆ ಇಲ್ಲೊಂದು ಕಡೆ ಮಾತ್ರ ಲಾಕ್‍ಡೌನ್ ಇನ್ನೂ ತೆರವಾಗಿಲ್ಲ.

ಹೌದು. ಮಂಜಿನ ನಗರಿ ಮಡಿಕೇರಿ ರಾಜ್ಯದ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿಗೆ ಬರೋ ಪ್ರವಾಸಿಗರ ಸಂಖ್ಯೆ ಒಂದೆರಡಲ್ಲ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಕೊರೊನಾ ಬಂದಾಗಿನಿಂದ ಇಲ್ಲಿನ ಸ್ಥಿತಿಗತಿಯೇ ಸಂಪೂರ್ಣ ಬದಲಾಗಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಕಮ್ಮಿ ಆದರೂ ಮಡಿಕೇರಿ ಮಾತ್ರ ಇನ್ನೂ ಲಾಕ್‍ಡೌನ್‍ನಿಂದ ತೆರವಾಗಿಲ್ಲ.

ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಭಾಗದಲ್ಲಿರೋ ಬೈಲುಕೊಪ್ಪದಲ್ಲಿರುವ ಟಿಬೆಟ್ ಕ್ಯಾಂಪ್ ಇಂದಿಗೂ ಸಂಪೂರ್ಣ ಬಂದ್ ಆಗಿದೆ. ಆಧ್ಯಾತ್ಮಿಕ ಕೇಂದ್ರಗಳಾಗಿರುವ ನಾಮ್ಡೋಲಿಂಗ್ ಮೊನಾಸ್ಟ್ರಿ ಸೇರಿದಂತೆ ಎಲ್ಲಾ ಕ್ಯಾಂಪ್‍ಗಳನ್ನು ಮುಚ್ಚಲಾಗಿದೆ. ಮೊನಾಸ್ಟ್ರಿಗಳಲ್ಲಿ ಬೃಹತ್ ಬುದ್ಧ ಪ್ರತಿಮೆಗಳು ಸೇರಿದಂತೆ ವಿಶೇಷ ದೇವಾಲಯಗಳಿದ್ದು, ಪ್ರತೀನಿತ್ಯ ಸಾವಿರಾರು ಪ್ರವಾಸಿಗರು ವೀಕ್ಷಣೆಗೆ ಬರ್ತಾರೆ. ಆದರೆ ಇದೀಗ ಬಂದ್ ಆಗಿರೋದ್ರಿಂದ, ಪ್ರವಾಸಿಗರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನಿರಾಶೆಯಿಂದ ವಾಪಸ್ ಆಗುತ್ತಿದ್ದಾರೆ.

ಲಾಕ್‍ಡೌನ್ ಹಾಗೂ ಪ್ರವಾಸಿಗರ ಕೊರತೆಯಿಂದಾಗಿ ಕ್ಯಾಂಪಿನ ಬಹುತೇಕ ರಸ್ತೆಗಳು ಬಿಕೋ ಅಂತಿವೆ. ಸದ್ಯ ಏಪ್ರಿಲ್ ತಿಂಗಳಲ್ಲಿ ಟಿಬೆಟಿಯನ್ನರು ಹೊಸ ವರ್ಷಾಚರಣೆ ಮಾಡೋದ್ರಿಂದ ಆ ಸಂದರ್ಭದಲ್ಲಿ ಲಾಕ್‍ಡೌನ್ ತೆರವು ಮಾಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಲಾಕ್‍ಡೌನ್‍ನ ಎಫೆಕ್ಟ್ ಇಲ್ಲಿನ ವ್ಯಾಪಾರಸ್ಥರ ಮೇಲೂ ತಟ್ಟಿದ್ದು, ಪ್ರವಾಸಿಗರಿಲ್ಲದೇ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ತಬ್ಧವಾಗಿದೆ. ಕೆಲವೊಂದು ದಿನಬಳಕೆ ವಸ್ತುಗಳ ಅಂಗಡಿಗಳು ತೆರೆದಿದ್ರೂ, ವ್ಯಾಪಾರ ಮಾತ್ರ ಆಗ್ತಿಲ್ಲ ಅನ್ನೋದು ಅಂಗಡಿ ಮಾಲೀಕರ ಅಳಲು.

ಒಟ್ಟಿನಲ್ಲಿ ದೇವರು ವರ ಕೊಟ್ರೂ ಪೂಜಾರಿ ಕೊಟ್ಟಿಲ್ಲ ಅನ್ನೋ ಹಂಗಾಗಿದೆ. ಎಲ್ಲೆಡೆ ಕೊರೊನಾರ್ಭಟ ಕಮ್ಮಿ ಆದ್ರೂ, ಮಡಿಕೇರಿಯಲ್ಲಿ ಲಾಕ್‍ಡೌನ್ ತೆರವಾಗದೇ ವ್ಯಾಪಾರಸ್ಥರ ಹೊಟ್ಟೆ ಮೇಲೂ ಬರೆ ಎಳೆದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *