ಲಸಿಕೆ ಹಾಕಿಸಿಕೊಳ್ಳುವಂತೆ ವೀಡಿಯೋ ಸಂದೇಶ ನೀಡಿದ 97ವರ್ಷದ ವೃದ್ಧೆ

Public TV
2 Min Read

ಕೊರೊನಾ ಲಸಿಕೆ ತೆಗೆದುಕೊಳ್ಳಲು ಯಾರೂ ಹಿಂಜರಿಯಬೇಡಿ. ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು 97 ವರ್ಷದ ವೃದ್ಧೆಯೊಬ್ಬರು ವೀಡಿಯೋ ಮೂಲಕ ನೀಡಿದ ಸಂದೇಶ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ನನಗೆ 97 ವರ್ಷವಾಗಿದೆ. ಮಾರ್ಚ್ 9ರಂದು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದೇನೆ. ಎರಡನೇ ಡೋಸ್ ಮೇ 9ರಂದು ಪಡೆಯಬೇಕಿತ್ತು. ಅದಕ್ಕಾಗಿ ಕಾಯುತ್ತಿದ್ದೇನೆ. ನನಗೆ ಲಸಿಕೆ ಪಡೆದುಕೊಂಡ ನಂತರ ಯಾವುದೇ ಅಡ್ಡಪರಿಣಾಮ ಆಗಿಲ್ಲ. ನೋವು, ಜ್ವರ ಏನೂ ಕಾಣಿಸಿಕೊಂಡಿಲ್ಲ. ಯಾರೂ ಲಸಿಕೆಯ ಬಗ್ಗೆ ಹೆದರಬೇಡಿ. ಕೊರೊನಾ ಲಸಿಕೆ ಪಡೆಯುವುದರಿಂದ ನಿಮಗೇ ಒಳ್ಳೆಯದು. ಅಷ್ಟೇ ಅಲ್ಲ, ನಿಮ್ಮ ಸುತ್ತಲೂ ಇರುವವರಿಗೂ ಒಳ್ಳೆಯದೇ. ಲಸಿಕೆ ಸುರಕ್ಷಿತವಾಗಿದ್ದು, ಸಹಜ ಜೀವನ ನಡೆಸಲು ಇದನ್ನು ಪಡೆಯುವುದೊಂದೇ ಮಾರ್ಗ ಎಂದು ಈ ಅಜ್ಜಿ ಹೇಳಿದ್ದನ್ನು ವಿಡಿಯೋದಲ್ಲಿ ಹೇಳುವ ಮೂಲಕವಾಗಿ ಎಲ್ಲರಲ್ಲಿಯೂ ಕೊರೊನಾ ಲಸಿಕೆ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವೃದ್ಧೆ ಮಾಡಿದ್ದಾರೆ.

ಭಾರತದಲ್ಲಿ ಮೇ 1ರಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಈ ಹಂತದಲ್ಲಿ 18-44ವರ್ಷದವರೆಗಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಎಲ್ಲ ರಾಜ್ಯಗಳಲ್ಲೂ ಇನ್ನೂ ಸರಿಯಾಗಿ ಪ್ರಾರಂಭವಿಲ್ಲ. ಕೆಲವು ಕಡೆಗಳಲ್ಲಿ ಪ್ರಾರಂಭವಾದರೆ ಅಡ್ಡಪರಿಣಾಮದ ಭಯದಿಂದ ಜನರೇ ಹಿಂದೇಟು ಹಾಕುತ್ತಿದ್ದಾರೆ.

ದೇಶದಲ್ಲಿ ಜನವರಿ 16ರಿಂದ ಕೊವಿಡ್ ಲಸಿಕೆ ವಿತರಣೆ ಶುರುವಾಗಿದ್ದು, ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್‍ಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 65 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ಮೇಲ್ಪಟ್ಟು, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗಿತ್ತು. ನಂತರ ಅದನ್ನು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿತ್ತು. ಮೂರನೇ ಹಂತದಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕೊಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಮೇ 1-ಮೇ 7ರ ನಡುವೆ ಸುಮಾರು 11.6 ಮಿಲಿಯನ್ ಡೋಸ್‍ಗಳಷ್ಟು ಲಸಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಲಸಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸರ್ಕಾರಗಳು ಸಿದ್ಧತೆ ನಡೆಸಿವೆ.

Share This Article
Leave a Comment

Leave a Reply

Your email address will not be published. Required fields are marked *