ಲಸಿಕೆ ಕೊರತೆ- ಖಾಸಗಿ ಆಸ್ಪತ್ರೆಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ

Public TV
1 Min Read

ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಲಸಿಕೆ ಅಭಾವ ಕಾಡುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ ಕೊಳ್ಳಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಇಷ್ಟು ದಿನ ಖಾಸಗಿ ಆಸ್ಪತ್ರೆಗಳು ಉತ್ಪಾದನಾ ಕಂಪನಿಗಳಿಂದ ನೇರವಾಗಿ ಕೊರೊನಾ ಲಸಿಕೆ ಕೊಳ್ಳಬಹುದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಖಾಸಗಿ ಆಸ್ಪತ್ರೆಗಳು ಸಹ ಕೋ-ವಿನ್ ಆಪ್‍ನಲ್ಲಿಯೇ ಆರ್ಡರ್ ಮಾಡಬೇಕು ಎಂದು ಹೊಸ ನಿಯಮದಲ್ಲಿ ತಿಳಿಸಿದೆ. ಕೊರೊನಾ ಲಸಿಕೆಯ ಸಂಗ್ರಹ ಹಾಗೂ ಲಾಭದ ಕುರಿತು ಪರಿಶೀಲಿಸುವ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಉತ್ಪಾದಕರಿಂದ ಕೊಳ್ಳುವಂತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋ-ವಿನ್ ಪೋರ್ಟಲ್‍ನಲ್ಲಿ ವ್ಯಾಕ್ಸಿನ್ ಆರ್ಡರ್ ಮಾಡಬೇಕು. ಅಲ್ಲದೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ಪೇಮೆಂಟ್ ಮಾಡಬೇಕು. ಜುಲೈ 1 ರಿಂದ ವ್ಯಾಕ್ಸಿನ್ ಖರೀದಿಯ ಹೊಸ ನಿಯಮಗಳು ಜಾರಿಗೆ ಬರಲಿವೆ.

ಉತ್ಪಾದಕರ ಕಡೆಯಿಂದ ನೇರವಾಗಿ ಖರೀದಿಸಿದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿವೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುತ್ತಿಲ್ಲ, ಸ್ಟಾಕ್ ಉಳಿಯುತ್ತಿದೆ ಎಂಬ ಕುರಿತು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಹೊಸ ನಿಯಮದ ಪ್ರಕಾರ, ಲಸಿಕೆ ಖರೀದಿಸಿದ ಬಳಿಕ ಸಂಗ್ರಹಣೆ ಹಾಗೂ ಲಸಿಕೆ ಹಾಕಿರುವುದು ಎಲ್ಲದರ ಕುರಿತು ಲೆಕ್ಕ ನೀಡಬೇಕಾಗುತ್ತದೆ. ನಿರ್ದಿಷ್ಟ ತಿಂಗಳಲ್ಲಿ ಅಥವಾ ವಾರದಲ್ಲಿ ಎಷ್ಟು ಲಸಿಕೆ ಖರ್ಚಾಗಿದೆ ಎಂಬುದನ್ನು ಖಾಸಗಿ ಆಸ್ಪತ್ರೆಗಳು ತಿಳಿಸಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ದಿನಗಳ ಕಾಲ ಸ್ಟಾಕ್ ಇಟ್ಟುಕೊಳ್ಳುವುದು ತಪ್ಪುತ್ತದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಲಸಿಕೆ ಸಿಗುತ್ತದೆ.

ಪ್ರಸ್ತುತ ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಲಸಿಕೆಗೆ ನಿಗದಿಪಡಿಸಿರುವ ಬೆಲೆಯ ಮೇಲೆ 150 ರೂ. ಸೇವಾ ಶುಲ್ಕವನ್ನು ವಿಧಿಸಲಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *