ಲಸಿಕೆಗೆ ಬಡವರು ಎಲ್ಲಿಂದ ಹಣ ತರಬೇಕು- ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದು, ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಕೊರೊನಾ ಲಸಿಕೆಗೆ ಹಣ ನೀಡಲು ಬಡವರಲ್ಲಿ ಶಕ್ತಿ ಇಲ್ಲ ಎಂದು ಹೇಳಿದೆ.

ಶುಕ್ರವಾರ ದೇಶದಲ್ಲಿನ ಕೊರೊನಾ ಸ್ಥಿತಿಗತಿ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೊರೊನಾ ಲಸಿಕೆಯ ದರ ಸಮಸ್ಯೆ ತುಂಬಾ ಗಂಭೀರವಾಗಿದೆ ಎಂದಿದ್ದಾರೆ. ಶೇ.50ರಷ್ಟು ವ್ಯಾಕ್ಸಿನ್‍ನನ್ನು ಕೇಂದ್ರ ಸರ್ಕಾರ ಖರೀದಿಸಿ ಫ್ರಂಟ್‍ಲೈನ್ ವರ್ಕರ್ಸ್ ಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ನೀಡಿಲಾಗುತ್ತಿದೆ. ಉಳಿದ ಶೇ.50ರಷ್ಟು ಲಸಿಕೆಯನ್ನು ರಾಜ್ಯ ಸರ್ಕಾರಗಳು ಖರೀದಿಸುತ್ತಿವೆ. ಆದರೆ ಸುಮಾರು 59.46 ಕೋಟಿ ಭಾರತೀಯರು 45 ವರ್ಷದ ಒಳಗಿನವರಿದ್ದಾರೆ, ಇದರಲ್ಲಿ ಬಹುತೇಕರು ಬಡವರಾಗಿದ್ದಾರೆ. ಲಸಿಕೆ ಖರೀದಿಸಲು ಅವರು ಎಲ್ಲಿಂದ ಹಣ ತರಬೇಕು ಎಂದು ಪ್ರಶ್ನಿಸಿದ್ದಾರೆ.

ಖಾಸಗೀಕರಣದ ಮಾದರಿಯನ್ನು ನಾವು ಅನುಸರಿಸುವುದಿಲ್ಲ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ, ನಾವು 18-44 ವರ್ಷದವರಿಗೆ ಲಸಿಕೆಯನ್ನು ಆದಷ್ಟು ಬೇಗ ನೀಡಬೇಕಿದೆ ಎಂದು ಹೇಳಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದಿಸಲಾಗುತ್ತಿದೆ ಎಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚುವರಿ ಉತ್ಪಾದನಾ ಕೇಂದ್ರಗಳಿಗೆ ಶಕ್ತಿ ತುಂಬಬೇಕಿದೆ. ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಬಗ್ಗೆ ವಿಮರ್ಶಿಸುವುದು ಇದರ ಉದ್ದೇಶವಲ್ಲ. 70-100 ವರ್ಷಗಳಿಂದ ಆರೋಗ್ಯ ಮೂಲಸೌಕರ್ಯವನ್ನು ಪಡೆದಿದ್ದೇವೆ. ನಮ್ಮ ರಾಷ್ಟ್ರದ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ನಮಗೆ ಕಾಳಜಿ ಇದೆ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದರು.

ವ್ಯಾಕ್ಸಿನ್‍ನ ಖಾಸಗಿ ಉತ್ಪಾದಕರು ಸಹ ಯಾವ ರಾಜ್ಯಕ್ಕೆ ಎಷ್ಟು ನೀಡಬೇಕೆಂದು ನಿರ್ಧರಿಸುವಂತಿಲ್ಲ ಎಂದು ತಿಳಿಸಿದೆ. ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 10ಕ್ಕೆ ಮುಂದೂಡಿದೆ. ಕೊರೊನಾ ವ್ಯಾಕ್ಸಿನ್, ಆಕ್ಸಿಜನ್ ಟ್ರಾನ್ಸ್‍ಪೋರ್ಟ್, ವ್ಯಾಕ್ಸಿನ್ ದರ ಹಾಗೂ ಔಷಧಿ ಮತ್ತು ಲಸಿಕೆಗೆ ಕಡ್ಡಾಯವಾಗಿ ಲೈಸೆನ್ಸ್ ನೀಡುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಈ ಬಗ್ಗೆ ವಿವರವಾದ ಆದೇಶ ಹೊರಡಿಸುವಂತೆ ಸೂಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *