ಲಯನ್ ಸೆನ್ಸಸ್ 2020 – ಭಾರತದಲ್ಲಿ ಶೇ.29ರಷ್ಟು ಹೆಚ್ಚಿದ ಸಿಂಹಗಳ ಸಂಖ್ಯೆ

Public TV
1 Min Read

ನವದೆಹಲಿ: ಲಯನ್ ಸೆನ್ಸಸ್ 2020ರ ಪ್ರಕಾರ, ಗುಜರಾತ್‍ನಲ್ಲಿ ಏಷ್ಯಾಟಿಕ್ ಸಿಂಹಗಳ ಜನಸಂಖ್ಯೆಯಲ್ಲಿ ಶೇ.29 ರಷ್ಟು ಏರಿಕೆ ಕಂಡುಬಂದಿದೆ.

ಅರಣ್ಯ ಇಲಾಖೆ ಜೂನ್ 5 ಮತ್ತು 6ರಂದು ಹಗಲು-ರಾತ್ರಿ ನಡೆಸಿದ ಸೆನ್ಸಸ್ ಪ್ರಕಾರ, ಈಗ ಸದ್ಯ ದೇಶದಲ್ಲಿ ಸುಮಾರು 674 ಸಿಂಹಗಳಿವೆ. ಮೇ 2015ರಲ್ಲಿ ನಡೆಸಿದ ಜನಗಣತಿಯಲ್ಲಿ ರಾಜ್ಯದಲ್ಲಿ 523 ಸಿಂಹಗಳು ಇದ್ದವು. ಆದರೆ ಈ ಬಾರಿಯ ಸೆನ್ಸಸ್‍ನಲ್ಲಿ 151 ಸಿಂಹಗಳ ಏರಿಕೆ ಕಂಡುಬಂದಿದೆ.

ಈ ಅಂಕಿ-ಅಂಶಗಳನ್ನು ಅರಣ್ಯ ಇಲಾಖೆ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಗುಜರಾತ್ ರಾಜ್ಯದಲ್ಲಿ ಸಿಂಹ ಜನಸಂಖ್ಯೆಯು 2001ರಿಂದ ದ್ವಿಗುಣಗೊಂಡಿದೆ ಮತ್ತು ಸಿಂಹಗಳ ಹೆಜ್ಜೆ ಗುರುತುಗಳು ಶೇ.400ರಷ್ಟು ಜಾಸ್ತಿಯಾಗಿದೆ. ಸಿಂಹಗಳ ವಿತರಣಾ ವ್ಯಾಪ್ತಿಯು 2015ರಲ್ಲಿ 30,000 ಚದರ ಕಿಲೋಮೀಟರ್ ವರೆಗೆ ವಿಸ್ತರಿಸಿತ್ತು. ಈಗ ಇದು ಶೇ.36ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿರುವ ಅರಣ್ಯ ಮತ್ತು ಪರಿಸರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ರಾಜ್ಯ ಸರ್ಕಾರದ ಪರಿಣಾಮಕಾರಿ ಸಂರಕ್ಷಣೆ ಮತ್ತು ನಿರ್ವಹಣಾ ಪ್ರಯತ್ನಗಳಿಂದಾಗಿ ನಮ್ಮ ದೇಶದಲ್ಲಿ ಸಿಂಹಗಳ ಜನಸಂಖ್ಯೆಯಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

2018ರಲ್ಲಿ ಸಿಂಹಗಳ ಮೇಲೆ ಪರಿಣಾಮ ಬೀರಿದ ಕೋರೆಹಲ್ಲು ಡಿಸ್ಟೆಂಪರ್ ವೈರಸ್ (ಸಿಡಿವಿ)ಯನ್ನು ಕಡಿಮೆ ಮಾಡಲು ಅರಣ್ಯ ಇಲಾಖೆಯು ಯಶಸ್ವಿಯಾಗಿದೆ ಎಂದು ಗುಪ್ತಾ ಹೇಳಿದ್ದಾರೆ. ವನ್ಯಜೀವಿ ತಜ್ಞರ ಪ್ರಕಾರ, ಗುಜರಾತ್‍ನಲ್ಲಿ ಸಿಂಹಗಳ ಸಮೃದ್ಧ ಜನಸಂಖ್ಯೆ ಇದೆ. ಈ ಭಾಗದಲ್ಲಿ ಮೂಲಗಳ ಪ್ರಕಾರ, 159 ಗಂಡು ಸಿಂಹಗಳು ಮತ್ತು 262 ಹೆಣ್ಣು ಸಿಂಹಗಳು ಇವೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *