ಲಡಾಖ್ ಗಡಿಯಲ್ಲಿ ಯುದ್ಧ ವೀರ ರಫೇಲ್‍ಗಳ ಗಸ್ತು

Public TV
1 Min Read

ನವದೆಹಲಿ: ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದು ಕೆಲವೇ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಭಾರತ ಚೀನಾ ನಡುವಿನ ವಾಸ್ತವಿಕ ಗಡಿ ರೇಖೆ ಬಳಿ ರಾತ್ರಿ ತಾಲೀಮು ಶುರು ಮಾಡಿವೆ. ಇದನ್ನೂ ಓದಿ: ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

ವಾರಗಳ ಹಿಂದೆಯಷ್ಟೇ ಭಾರತೀಯ ವಾಯುಪಡೆ ಸೇರಿರುವ ಐದು ರಫೇಲ್ ಯುದ್ಧ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ರಫೇಲ್ ಯುದ್ಧವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಈಗಾಗಲೇ ಲಡಾಖ್ ಪ್ರದೇಶಗಳಲ್ಲಿ ರಾತ್ರಿ ವೇಳೆ ತಾಲೀಮು ಶುರುಮಾಡಿವೆ. ರಫೇಲ್ ಆರ್ಭಟ ಕಂಡು ಕೊಟ್ಟ ವಾಗ್ದಾನ ಮರೆತು ಭಾರತದ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾ ಸೈನಿಕರಿಗೆ ಆತಂಕ ಶುರುವಾಗಿದೆ.

ಲಡಾಖ್ ಪೂರ್ವಭಾಗದಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಯೋಧರು ಅತಿಕ್ರಮಣ ಮಾಡಿದ್ದಾರೆ. ಟೆಂಟ್ ಹಾಕಿ ಸಂಚು ರೂಪಿಸಿದ್ದಾರೆ. ಯಾವುದೇ ಸಯಮದಲ್ಲಿ ಯುದ್ಧ ಆರಂಭವಾಗಬಹುದು ಎಂಬ ಆತಂಕದ ಕಾರ್ಮೋಡ ಸೃಷ್ಟಿಯಾಗಿದೆ. ವಾಸ್ತವಿಕ ನಿಯಂತ್ರಣ ಗಡಿ ರೇಖೆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿಗೆ ಪೂರಕವಾಗಿ ಲಡಾಖ್‍ನ ಹಿಮಪರ್ವತಗಳ ನಡುವೆ ರಾತ್ರಿ ವೇಳೆ ತಾಲೀಮು ನಡೆಸುತ್ತಿರುವುದಾಗಿ ಭಾರತೀಯ ವಾಯುಪಡೆ ಮೂಲಗಳು ತಿಳಿಸಿವೆ.

ಒಂದು ವೇಳೆ ಪರಿಸ್ಥಿತಿ ಬಿಗಡಾಯಿಸಿದರೆ, ಗಗನದಿಂದ ಗಗನಕ್ಕೆ ಚಿಮ್ಮುವ ಮೀಟಿಯಾರ್ ಕ್ಷಿಪಣಿಗಳು ಹಾಗೂ ಗಗನದಿಂದ ಭೂಮಿಗೆ ಅಪ್ಪಳಿಸುವ SCALP ಕ್ಷಿಪಣಿಯನ್ನು ಉಡಾವಣೆ ಮಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ರಫೇಲ್ ಯುದ್ಧವಿಮಾನಗಳ ತಾಲೀಮು ಸಾಗಿದೆ ಎನ್ನಲಾಗಿದೆ.

ಸದ್ಯಕ್ಕೆ ಈ ಯುದ್ಧ ವಿಮಾನಗಳು ವಾಸ್ತವ ಗಡಿರೇಖೆಯಿಂದ ಸ್ವಲ್ಪ ದೂರದಲ್ಲಿ ಹಾರಾಟ ನಡೆಸುತ್ತಿವೆ. ಈ ಪ್ರದೇಶದಲ್ಲಿ ಚೀನಾ ಸೇನೆ ರೇಡಾರ್‌ಗಳನ್ನು ಸ್ಥಾಪಿಸಿರುವುದರಿಂದ, ಇವುಗಳ ಫ್ರೀಕ್ವೆನ್ಸಿ ಸಿಗ್ನೇಚರ್‌ಗಳನ್ನು ಗ್ರಹಿಸಿ, ದಾಳಿ ಮಾಡುವ ಸಂದರ್ಭದಲ್ಲಿ ಅವನ್ನು ಜಾಮ್ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *