ಲಂಡನ್‍ನಲ್ಲಿ ಸ್ಮಾರಕ ಫಲಕ ಪಡೆದ ಭಾರತೀಯ ಮೂಲದ ನೂರ್ ಇನಾಯತ್ ಖಾನ್

Public TV
2 Min Read

– ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಧೈರ್ಯಶಾಲಿ ಮಹಿಳೆ

ಲಂಡನ್: ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಮೂಲದ ಬ್ರಿಟನ್ ಗೂಢಚಾರಿಣಿ ನೂರ್ ಇನಾಯತ್ ಖಾನ್‍ಗೆ ಲಂಡನ್‍ನಲ್ಲಿ ಸ್ಮಾರಕ ಫಲಕ ನೀಡಿ ಗೌರವಿಸಲಾಗಿದೆ.

ಲಂಡನ್‍ನಲ್ಲಿ ಇಂಗ್ಲಿಷ್ ಹೆರಿಟೇಜ್ ಚಾರಿಟಿ ನಡೆಸುತ್ತಿರುವ ಬ್ಲೂ ಪ್ಲೇಕ್ ಯೋಜನೆಯಡಿಯಲ್ಲಿ, ನೂರ್ ಇನಾಯತ್ ಖಾನ್ ಅವರ ಸ್ಮಾರಕ ರಚಿಸಿ ಅದನ್ನು ಬ್ಲೂ ಪ್ಲೇಕ್ ವರ್ಗಕ್ಕೆ ಸೇರಿಸಲಾಗಿದೆ. ಈ ಮೂಲಕ ಲಂಡನ್‍ನಲ್ಲಿ ಸ್ಮಾರಕ ಪಡೆದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಖಾನ್ ಪಾತ್ರರಾಗಿದ್ದಾರೆ.

ನೂರ್ ಇನಾಯತ್ ಅವರು ವಾಸ ಮಾಡುತ್ತಿದ್ದ ಲಂಡನ್‍ನ 4ನೇ ಟವಿಟಾನ್ ಸ್ಟ್ರೀಟ್‍ನ ಬ್ಲೂಮ್ಸ್ ಬರಿ ಮನೆಯ ಮುಂಭಾಗದಲ್ಲಿ ಆಕೆಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದು, ಅದನ್ನು ಬ್ಲೂ ಪ್ಲೇಕ್‍ಕ್ಕೆ ಸೇರಿಸಲಾಗಿದೆ. ಇಂಗ್ಲಿಷ್ ಹೆರಿಟೇಜ್ ಎಂಬ ಸಂಸ್ಥೆ ಲಂಡನ್‍ನಲ್ಲಿರುವ ಗಣ್ಯ ವ್ಯಕ್ತಿಗಳ ಸ್ಮಾರಕ ಮತ್ತು ಅವರು ವಾಸವಿದ್ದ ಮನೆಗಳನ್ನು ರಕ್ಷಣೆ ಮಾಡುತ್ತಾ ಬಂದಿದೆ. ಈಗ ಈ ವರ್ಗಕ್ಕೆ ನೂರ್ ಇನಾಯತ್ ವಾಸವಿದ್ದ ಮನೆಯೂ ಸೇರಿದೆ.

ಭಾರತೀಯ ಸೂಫಿ ಸಂತ ಹಜರತ್ ಇನಾಯತ್ ಖಾನ್ ಅವರ ಪುತ್ರಿ ಮತ್ತು 18ನೇ ಶತಮಾನದಲ್ಲಿ ಮೈಸೂರು ಪ್ರಾಂತ್ಯದ ದೊರೆಯಾಗಿದ್ದ ಟಿಪ್ಪು ಸುಲ್ತಾನ್ ಅವರ ವಂಶಸ್ಥರಾಗಿದ್ದ ನೂರ್ ಇನಾಯತ್ ಅವರು, 1943ರಲ್ಲಿ ನಾಜಿ ಆಕ್ರಮಿತ ಫ್ರಾನ್ಸ್ ಗೆ ಬ್ರಿಟನ್‍ನ ವಿಶೇಷ ಕಾರ್ಯಾಚರಣೆ ಕಾರ್ಯನಿರ್ವಾಹಕ (ಎಸ್‍ಒಇ) ಸಂಸ್ಥೆಯಿಂದ ರಹಸ್ಯ ರೇಡಿಯೊ ಆಪರೇಟರ್ ಆಗಿ ತೆರಳಿದ್ದರು. ಇವರು 1944ರಲ್ಲಿ ಡಚ್ ಸೆರೆ ಶಿಬಿರದಲ್ಲಿ ಕೊಲ್ಲಲ್ಪಟ್ಟರು.

ಬ್ರಿಟನ್‍ನ ಎಸ್‍ಒಇ ಸಂಸ್ಥೆ ಮಹಾಯುದ್ಧದ ಸಮಯದಲ್ಲಿ ಅಂದಿನ ಬ್ರಿಟನ್ ಪ್ರಧಾನ ಮಂತ್ರಿ ವಿನ್‍ಸ್ಟನ್ ಚರ್ಚಿಲ್ ಸ್ಥಾಪಿಸಿದ ಸ್ವತಂತ್ರ ಬ್ರಿಟಿಷ್ ರಹಸ್ಯ ಸೇವಾ ಸಂಸ್ಥೆಯಾಗಿತ್ತು. ಜೊತೆಗೆ ನೂರ್ ಇನಾಯತ್ ಅವರು ನಾಜಿ ಆಕ್ರಮಿತ ಫ್ರಾನ್ಸ್‍ಗೆ ಬ್ರಿಟನ್ ಕಳುಹಿಸಿದ ಮೊದಲ ಮಹಿಳಾ ರೇಡಿಯೋ ಆಪರೇಟರ್ ಎನಿಸಿಕೊಂಡಿದ್ದರು. ನೂರ್ ಅವರ ಧೈರ್ಯ ಮತ್ತು ಸಾಹಸವನ್ನು ಮೆಚ್ಚಿದ ಬ್ರಿಟನ್ ಸರ್ಕಾರ ಅವರಿಗೆ 1949ರಲ್ಲಿ ಮರಣೋತ್ತರ ಜಾರ್ಜ್ ಕ್ರಾಸ್ ಪ್ರಶಸ್ತಿ ನೀಡಿ ಗೌರವಿಸಿತ್ತು.

ನೂರ್ ಇನಾಯಾತ್ ಖಾನ್ ಅವರನ್ನು 30ನೇ ವಯಸ್ಸಿನಲ್ಲೇ ಹತ್ಯೆ ಮಾಡಲಾಗಿತ್ತು. 1944ರಲ್ಲಿ ನಾಜಿ ಆಕ್ರಮಿತ ಫ್ರಾನ್ಸ್ ನಲ್ಲಿ ಬ್ರಿಟನ್ ರಹಸ್ಯ ರೇಡಿಯೊ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನೂರ್ ಇನಾಯತ್ ಅವರನ್ನು ನಾಜಿ ಸೈನಿಕರು ಸೆರೆ ಹಿಡಿದಿದ್ದರು. ಆದರೆ ಅವರಿಗೆ ಎಷ್ಟೇ ಚಿತ್ರಹಿಂಸೆ ನೀಡಿದ್ದರೂ ಅವರು ಬ್ರಿಟನ್‍ನ ಯಾವುದೇ ರಹಸ್ಯ ವಿಚಾರವನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಅವರ ನಿಜವಾದ ಹೆಸರನ್ನು ಕೂಡ ಅವರಿಗೆ ಹೇಳಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *