ರೌಡಿಶೀಟರ್ ಫ್ರೂಟ್ ಇರ್ಫಾನ್‍ನಿಂದ ಬೆದರಿಕೆ- ಜನರ ಅಹವಾಲು ಸ್ವೀಕರಿಸಲು ಪೊಲೀಸರ ನಿರ್ಧಾರ

Public TV
1 Min Read

ಹುಬ್ಬಳ್ಳಿ: ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ವಿರುದ್ಧ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ನಿರ್ಧಾರವನ್ನು ಕೈಗೊಂಡಿದೆ.

ಫ್ರೂಟ್ ಇರ್ಫಾನ್ ಮತ್ತು ಆತನ ಸಹಚರರು ಸಾರ್ವಜನಿಕರಲ್ಲಿ ಮೋಸ ಮಾಡಿ ಭೂ ಕಬಳಿಸಿದ ಬಗ್ಗೆ, ಧಮ್ಕಿ ಹಾಕಿ ಹಣ ವಸೂಲಿ ಮಾಡಿರುವ ಕುರಿತು ಸಾರ್ವಜನಿಕರಿಂದ ದೂರು ಸ್ವೀಕರಿಸಲು ಕಮಿಷನರೇಟ್ ನಿರ್ಧರಿಸಿದ್ದಾರೆ. ಅಲ್ಲದೇ ಫ್ರೂಟ್ ಇರ್ಫಾನ್‍ನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ತೊಂದರೆಯಾಗಿ ದೂರು ನೀಡಿದ್ದರು ನ್ಯಾಯ ಸಿಗದಿರುವ, ಹೆದರಿಕೆಯಿಂದ ದೂರು ನೀಡದೆ ಇರುವವರು ಪೊಲೀಸ್ ಕಮಿಷನರೇಟ್‍ಗೆ ಅಹವಾಲು ಸಲ್ಲಿಸಬಹುದಾಗಿದೆ.

ಸೆ.03 ರಂದು ಬೆಳಗ್ಗೆ 12 ಗಂಟೆಗೆ ಸಹಾಯಕ ಪೊಲೀಸ ಆಯುಕ್ತರ ಕಚೇರಿ ಧಾರವಾಡ ವಿಭಾಗ, ಧಾರವಾಡ ಅವರ ಕಚೇರಿಗೆ ಬಂದು ನಿರ್ಭಯವಾಗಿ ತಮ್ಮ ಅಹವಾಲುಗಳನ್ನು ತಿಳಿಸಲು ಸೂಚಿಸಲಾಗಿದೆ. ಸದರಿ ದೂರುದಾರರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಹತ್ಯೆಯಾಗಿದ್ದ ಫ್ರೂಟ್ ಇರ್ಫಾನ್ ಈ ಹಿಂದೆ ನಾಲ್ಕು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ರೌಡಿಶೀಟರ್ ಅಡಿಯಲ್ಲಿ ಕೇಸ್ ದಾಖಲಿಸಿ ಗಡಿಪಾರು ಮಾಡಲಾಗಿತ್ತು. ಆದರೆ ಗಡಿಪಾರು ಶಿಕ್ಷೆ ನಂತರ ಮರಳಿ ಮಗನ ಮದುವೆಯ ದಿನ ಬೀಗರನ್ನು ಬೀಳ್ಕೊಡುತ್ತಿದ್ದ ವೇಳೆ ಮುಂಬೈ ಮೂಲದ ಶೂಟರ್ ಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಈಗಾಗಲೇ 8 ಜನರನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇದೀಗ ಪೊಲೀಸ್ ಇಲಾಖೆ ಫ್ರೂಟ್ ಇರ್ಫಾನ್ ವಿರುದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನ್ಯಾಯ ಕೊಡಿಸಲು ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *