ಬೆಂಗಳೂರು: ಕೊರೊನಾ ಸೋಂಕು ಹೆಚ್ಚಿದಂತೆ ಸೋಂಕಿನ ಲಕ್ಷಣ ಇಲ್ಲದ ಸೋಂಕಿತರ ಸಂಖ್ಯೆಯೂ ಏರಿಕೆ ಆಗ್ತಿದೆ. ಹೀಗಾಗಿ ಎ ಸಿಂಪ್ಟಮ್ಯಾಟಿಕ್ ರೋಗಿಗಳನ್ನು ಹೋಂ ಐಸೋಲೇಷನ್ ಮಾಡಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಡೆಡ್ಲಿ ವೈರಾಣುವಿನ ಲಕ್ಷಣಗಳೇ ಇಲ್ಲದೇ ಜನರಿಗೆ ವಕ್ಕರಿಸುತ್ತಿದೆ. ಸಮುದಾಯ ಮಟ್ಟಿಗೂ ಕೊರೊನಾ ತನ್ನ ಕಬಂಧಬಾಹು ಚಾಚಿದೆ. ಹೀಗಿರುವಾಗ ಎ ಸಿಂಪ್ಟಮ್ಯಾಟಿಕ್ ರೋಗಿಗಳಿಗೆ 14 ದಿನಗಳ ಹೋಂ ಐಸೋಲೇಷನ್‍ನಲ್ಲಿಟ್ಟು ಚಿಕಿತ್ಸೆ ನೀಡಲು ಬಿಎಸ್‍ವೈ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕೋವಿಡ್ ಪಾಸಿಟಿವ್ ರೋಗಿಗಳು ಹೋಂ ಐಸೋಲೇಷನ್‍ಗೆ ಒಳಗಾಗಲು ಪ್ರತ್ಯೇಕ ನಿಬಂಧನೆಗಳನ್ನ ಮಾಡಿದೆ.
ಹೋಂ ಐಸೋಲೇಷನ್ ಯಾರಿಗೆ..? ಹೇಗೆ..?
* ಹೊಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯೋರಿಗೆ ಶುಗರ್, ಬಿಪಿ, ಹೃದಯ, ಕಿಡ್ನಿ ಸಮಸ್ಯೆ ಇರಬಾರದು.
* 50ವರ್ಷದೊಳಗಿನ ವಯಸ್ಸಿನವರು ಮಾತ್ರ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯಬಹುದು.
* ಸೋಂಕಿತ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಮಾಡಬೇಕು.
* ಸೋಂಕಿತ ವ್ಯಕ್ತಿ ಬಳಸುವ ಶೌಚಾಲಯವನ್ನ ಇತರೆ ಕುಟುಂಬಸ್ಥರು ಬಳಸಬಾರದು.
* ಸೋಕಿಂತ ವ್ಯಕ್ತಿಯ ಕೊಠಡಿಗೆ ಭೇಟಿ ಕೊಡುವವರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ.
* ಸೋಂಕಿತ ವ್ಯಕ್ತಿಯ ಕೊಠಡಿಯಲ್ಲಿ ಕೇರ್ ಟೇಕರ್ ಹೆಚ್ಚು ಸಮಯ ಇರುವಂತಿಲ್ಲ.
* ಕೊರೋನಾ ಪಾಸಿಟಿವ್ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಬಳಸಬೇಕು..
* ಸೋಕಿಂತನ ದೇಹದ ಉಷ್ಣತೆ ಮತ್ತು ಉಸಿರಾಟ ಬಗ್ಗೆ ಮಾನಿಟರ್ ಮಾಡಿ ದಾಖಲಿಸಬೇಕು.
* ಉಸಿರಾಟದ ಸಮಸ್ಯೆ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಕೂಡಲೇ ಡಾಕ್ಟರ್ ಸಲಹೆ ಪಡೆಯಬೇಕು.
ಹೋಂ ಐಸೋಲೇಷನ್‍ನಲ್ಲಿರುವ ಪಾಸಿಟಿವ್ ರೋಗಿಗಳು ಹೇಗೆ ಚಿಕಿತ್ಸೆ ಪಡೆಯಬೇಕು. ಹೇಗಿರಬೇಕು ಅಂತ ತಜ್ಞರು ಹಲವು ಸಲಹೆಗಳನ್ನ ಕೊಟ್ಟಿದ್ದಾರೆ.
* ರಾಮಯ್ಯ ಆಸ್ಪತ್ರೆ ವೈದ್ಯ ಡಾ. ತಾರನಾಥ್
ಗುಣಲಕ್ಷಣಗಳು ಇಲ್ಲದ ರೋಗಿಗಳಿಗೆ ಹೋಂ ಐಸೋಲೇಷನ್ ಮಾಡಬೇಕು. ಇವರಿಗೆ ಬಿಪಿ, ಶುಗರ್ ಇರಬಾರದು. 50 ವರ್ಷಕ್ಕಿಂತ ಕೆಳಗಿನವರು ಆಗಿರಬೇಕು. ಮನೆಯಲ್ಲಿ ಪ್ರತ್ಯೇಕ ಕೊಠಡಿ ಇರಬೇಕು. ಪ್ರತ್ಯೇಕ ಟಾಯ್ಲೆಟ್, ಬಾತ್ ರೂಂ ಇರಬೇಕು. ಪ್ರತಿದಿನ ಆರೋಗ್ಯದ ತಪಾಸಣೆ ಅಗತ್ಯ. ಸ್ಯಾನಿಟೈಸರ್, ಹ್ಯಾಂಡ್ ವಾಶ್ ಮಾಡಬೇಕು. ವಿಟಮಿನ್ ಸಿ ಇರುವ ಹಣ್ಣುಗಳನ್ನು ತಿನ್ನಿ. ಬೆಳ್ಳುಳ್ಳಿ, ಶುಂಠಿ, ಅರಿಶಿನ ಪುಡಿಯನ್ನ ಹೆಚ್ಚಾಗಿ ಉಪಯೋಗಿಸಿ. ನೀರನ್ನು ಹೆಚ್ಚು ಕುಡಿಯಿರಿ. ಆತ್ಮಸ್ಥೈರ್ಯದಿಂದ ಇರಿ. ರೋಗಿ, ಕೇರ್ ಟೇಕರ್ ಯಾರೇ ಆಗಿರಲಿ ಧೈರ್ಯದಿಂದಿರಬೇಕು ಎಂದು ರಾಮಯ್ಯ ಆಸ್ಪತ್ರೆ ವೈದ್ಯ ಡಾ. ತಾರನಾಥ್ ಹೇಳುತ್ತಾರೆ.
* ವೈದ್ಯ ಡಾ. ಭುಜಂಗ ಶೆಟ್ಟಿ
ಹೋಂ ಐಸೋಲೇಷನ್‍ನಲ್ಲಿದ್ದವರಿಗೆ ಯಾವುದೇ ಕಾಯಿಲೆ ಇರಬಾರದು. ಪ್ರತ್ಯೇಕ ಕೊಠಡಿ, ಟಾಯ್ಲೆಟ್ ಇರಬೇಕು. ರೋಗಿಯನ್ನು ನೋಡಿಕೊಳ್ಳುವವರು ತುಂಬಾ ಹುಷಾರಾಗಿ ಇರಬೇಕು. ರೋಗಿ ಇರುವ ರೂಂಗೆ ಹೋಗುವವರು ಮಾಸ್ಕ್, ಗ್ಲೌಸ್ ಹಾಕಲೇಬೇಕು. ಆರೋಗ್ಯ ಸೇತು ಆ್ಯಪ್ ಅನ್ನು ಅಪ್ಡೇಟ್ ಮಾಡುತ್ತಿರಬೇಕು. ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ವೈದ್ಯರಿಗೆ ತಿಳಿಸಬೇಕು. ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ದಿನಕ್ಕೆ 8-10 ಲೋಟ ನೀರು ಕುಡಿಯಬೇಕು ಎಂದು ಹೇಳುತ್ತಾರೆ.
* ಡಾ. ಸಿ ರಾಮಚಂದ್ರ, ನಿರ್ದೇಶಕರು, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ
ಎ ಸಿಮ್ಟಮ್ಯಾಟಿಕ್ ರೋಗಿಗಳಿಗೆ ಹೋಂ ಐಸೋಲೇಷನ್ ಮಾಡಬಹುದು. 60 ವರ್ಷಕ್ಕಿಂತ ಕೆಳಗಿನವರಿಗೆ ಹೋಂ ಐಸೋಲೇಷನ್ ಮಾಡಬಹುದು. ಸೋಂಕಿತ ವ್ಯಕ್ತಿ ಹೋಂ ಐಸೋಲೇಷನ್‍ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಬೇಕು. ಸೋಂಕಿತ ವ್ಯಕ್ತಿ ಪ್ರತ್ಯೇಕ ಶೌಚಾಲಯವನ್ನ ಬಳಸಬೇಕು. ಸೋಂಕಿತ ವ್ಯಕ್ತಿಯ ಜೊತೆ ಹೆಚ್ಚು ಹೊತ್ತು ಮನೆಯವ್ರು ಸಮಯ ಕಳೆಯಬಾರದು. ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ಬೇರೆಯವರು ಬಳಸಬಾರದು ಎಂದು ತಿಳಿಸಿದ್ದಾರೆ.
* ಪದ್ಮಿನಿ ಪ್ರಸಾದ್, ಸ್ತ್ರೀರೋಗ ತಜ್ಞೆ
ಹೊರಗಡೆಯಿಂದ ತಂದ ವಸ್ತುಗಳನ್ನ ಸ್ಯಾನಿಟೈಸ್ ಮಾಡಬೇಕು. ಹಣ್ಣು, ತರಕಾರಿಗಳನ್ನು ಸ್ವಲ್ಪ ಹೊತ್ತು ಹೊರಗೆ ಇಡುವುದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಬೇಕು. ಮನಸ್ಸಿನಲ್ಲಿ ಆತಂಕ, ಭಯ ಇಟ್ಟುಕೊಳ್ಳಬೇಡಿ, ಧೈರ್ಯವಾಗಿರಿ ಎಂದು ಹೇಳಿದ್ದಾರೆ.
* ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ
ಎ ಸಿಮ್ಟಮ್ಯಾಟಿಕ್ ರೋಗಿಗಳಿಗೆ ಹೋಂ ಐಸೋಲೇಷನ್ ಮಾಡಬಹುದು. 10 ವರ್ಷಕ್ಕಿಂತ ಮೇಲ್ಪಟ್ಟವರು, 50 ವರ್ಷಕ್ಕಿಂತ ಕೆಳಗಿನವರು ಅರ್ಹರು. ಹೃದಯ ಸಂಬಂಧ ಕಾಯಿಲೆ, ಕಿಡ್ನಿ ವೈಫಲ್ಯ ಇದ್ದವರಿಗೆ ಸೂಕ್ತವಲ್ಲ. ಹೋಂ ಐಸೋಲೇಷನ್‍ನಲ್ಲಿದ್ದವರು ಅವರದೇ ಥರ್ಮಾಮೀಟರ್ ಇಟ್ಟುಕೊಳ್ಳಬೇಕು. ಉಷ್ಣತೆಯನ್ನು ಆಗಾಗ ದಾಖಲಿಸಿಕೊಳ್ಳುತ್ತಿರಬೇಕು. ಹೋಂ ಐಸೋಲೇಷನ್‍ನಲ್ಲಿದ್ದವರು ಪ್ರತ್ಯೇಕ ಕೊಠಡಿಯಲ್ಲಿರಬೇಕು. ಈ ಕೊಠಡಿಗೆ ಬೆಳಕು, ಬಿಸಿಲು ಚೆನ್ನಾಗಿ ಬರುವಂತಿರಬೇಕು. ಕೊಠಡಿಯಲ್ಲಿ ಪ್ರತ್ಯೇಕವಾದ ಬಾತ್ ರೂಂ, ಟಾಯ್ಲೆಟ್ ಇರಬೇಕು. ಮನೆಯಲ್ಲೂ ಮಾಸ್ಕ್, ಗ್ಲೌಸ್ ಹಾಕಿಕೊಳ್ಳಬೇಕು ಎಂದಿದ್ದಾರೆ.
ಹೋಂ ಐಸೋಲೇಷನ್‍ನಲ್ಲಿದ್ದವರು ಹಣ್ಣು, ಹಾಲು ತೆಗೆದುಕೊಳ್ಳಬೇಕು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಬಾಳೆಹಣ್ಣನ್ನ ಸೇವಿಸಬೇಕು. ಸಂಗೀತ, ಆಧ್ಯಾತ್ಮದ ಕಡೆ ಮನಸ್ಸನ್ನು ಒಡ್ಡಬೇಕು. ಚಿಂತೆ ಮಾಡದೇ ಶಾಂತ, ಸಮಾಧಾನದಿಂದಿರಿ. ಸೂರ್ಯ ನಮಸ್ಕಾರ, ಯೋಗ ಮಾಡಿ, ಧ್ಯಾನ ಮಾಡಿ.
* ಡಾ.ಗಿರಿಧರ್ ಕಜೆ, ಆರ್ಯವೇದ ವೈದ್ಯ
ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು. ಬಿಸಿ ನೀರಿಗೆ 5-6 ತುಳಸಿ ಹಾಕಿ ನೀರನ್ನು ಕುಡಿಯಬೇಕು. ಹಾಲಿಗೆ ಅರಿಶಿನ ಹಾಕಿ ಕುದಿಸಿ, ಬೆಲ್ಲ ಅಥವಾ ಸಕ್ಕರೆ ಹಾಕಿಕೊಂಡು ಕುಡಿಯುವುದು. ಕಷಾಯವನ್ನು ಕುಡಿಯುವುದು. ಅಮೃತಬಳ್ಳಿಯ ಕಷಾಯ ಕುಡಿಯವುದು. ತಣ್ಣಗಿರುವ ಆಹಾರವನ್ನು ಸೇವಿಸಬಾರದು. ಜಂಕ್ ಫುಡ್ ತಿನ್ನಬಾರದು. ದಾಳಿಂಬೆ, ಪಪ್ಪಾಯವನ್ನು ಹೆಚ್ಚಾಗಿ ಸೇವಿಸಿ ಎಂದು ಸಲಹೆ ನಿಡಿದ್ದಾರೆ.
ಮಹಾರಾಷ್ಟ್ರದಲ್ಲೂ ಕೂಡ ಎ ಸಿಂಪ್ಟಮ್ಯಾಟಿಕ್ ರೋಗಿಗಳಿಗೆ ಮನೆಯಲ್ಲೇ ಐಸೋಲೇಷನ್ ವ್ಯವಸ್ಥೆ ಇದೆ. ರಾಜ್ಯ ಸರ್ಕಾರವೂ ಕೂಡ ಇದೆ ಮಾಡೆಲ್‍ಗೆ ಒಲವು ತೋರಿದೆ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್ ಪ್ರಾಬ್ಲಂ ಬಗೆಹರಿಯಲಿದೆ. ಮತ್ತು ಸೋಂಕು ಮತ್ತಷ್ಟು ಹರಡುವಿಕೆಗೆ ಬ್ರೇಕ್ ಬಿಳಲಿದೆ.