ರೈಲ್ವೇ ಮೂಲಕ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ 13 ಜಿಲ್ಲೆಗಳ ಜನರು

Public TV
1 Min Read

ಹುಬ್ಬಳ್ಳಿ/ಧಾರವಾಡ: ದೆಹಲಿ-ಬೆಂಗಳೂರು ಶ್ರಮಿಕ ಎಕ್ಸ್ ಪ್ರೆಸ್ ರೈಲಿನ ಮೂಲಕ ಆಗಮಿಸಿದ, ರಾಜ್ಯದ ವಿವಿಧ 13 ಜಿಲ್ಲೆಗಳ 293 ಪ್ರಯಾಣಿಕರು ಇಂದು ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಳಿದುಕೊಂಡರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪ ಪೊಲೀಸ್ ಆಯುಕ್ತರಾದ ಕೃಷ್ಣಕಾಂತ್, ಎಂ.ಬಿ.ಬಸರಗಿ, ತಹಶೀಲ್ದಾರರಾದ ಶಶಿಧರ್ ಮಾಡ್ಯಾಳ, ಪ್ರಕಾಶ್ ನಾಶಿ, ವಾಕರಸಾಸಂ ಅಧಿಕಾರಿಗಳಾದ ಹೆಚ್.ಆರ್.ರಾಮನಗೌಡರ್, ಅಶೋಕ್ ಪಾಟೀಲ, ರೇಲ್ವೇ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ದೂರದ ಪ್ರಯಾಣದಿಂದ ತವರಿಗೆ ಮರಳಿದ ಜನರನ್ನು ಅವರ ಜಿಲ್ಲೆಗಳಿಗೆ ಕಳುಹಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಶಿವಮೊಗ್ಗ-67, ಬೆಳಗಾವಿ-51, ಚಿಕ್ಕಮಗಳೂರು-05, ಉತ್ತರ ಕನ್ನಡ-09, ಕೊಪ್ಪಳ-10, ಚಿತ್ರದುರ್ಗ-12, ದಕ್ಷಿಣ ಕನ್ನಡ-42, ವಿಜಯಪುರ-32, ಹಾವೇರಿ-14, ಬಾಗಲಕೋಟ-13, ಧಾರವಾಡ-32, ಹಾಸನ -5 ಹಾಗೂ ಗದಗ ಜಿಲ್ಲೆಯ ಒಬ್ಬರು ಸೇರಿ ಒಟ್ಟು 293 ಜನರನ್ನು ಆಯಾ ಜಿಲ್ಲಾಡಳಿತಗಳು ಕಳುಹಿಸಿದ್ದ ಸಾರಿಗೆ ಬಸ್ಸುಗಳು ಹಾಗೂ ಇತರ ವಾಹನಗಳ ಮೂಲಕ ಕಳುಹಿಸಿಕೊಡಲಾಯಿತು.

ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳ ಪ್ರಯಾಣಕ್ಕೆ ಸ್ವತಃ ಅಧಿಕಾರಿಗಳೇ ಮುಂದೆ ನಿಂತು ಸಹಾಯ ಮಾಡಿದ ರೀತಿಗೆ ಜನತೆ ಮೆಚ್ಚುಗೆ ಸೂಚಿಸಿದರು. ಬಸ್ಸಿನಲ್ಲಿ ತೆರಳಿದ ಪ್ರಯಾಣಿಕರಿಗೆ ಜಿಲ್ಲಾಡಳಿತ ಹಾಗೂ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಕುಡಿಯುವ ನೀರು, ಉಪಹಾರ ಪೂರೈಸಲಾಯಿತು. ದೂರದ ಪ್ರಯಾಣದಿಂದ ದಣಿದ ಜೀವಗಳು ಧಾರವಾಡ ಜಿಲ್ಲಾಡಳಿತದ ಶಿಸ್ತು ಮತ್ತು ಕರ್ತವ್ಯ ನಿರ್ವಹಣೆಯ ರೀತಿಗೆ ಹರ್ಷಚಿತ್ತರಾಗಿ ತವರಿನತ್ತ ಮುಖ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *