ರೈಲು, ಲಾರಿಯಲ್ಲಿ ಮಕ್ಕಳಿಗೆ ಜನ್ಮ ನೀಡಿದ ಕಾರ್ಮಿಕ ಮಹಿಳೆಯರು

Public TV
2 Min Read

ಭೋಪಾಲ್: ರೈಲು ಮತ್ತು ಲಾರಿಯಲ್ಲಿ ಇಬ್ಬರು ಕಾರ್ಮಿಕ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿರುವ ಎರಡು ಪ್ರತ್ಯೇಕ ಘಟನೆಗಳು ಮಧ್ಯಪ್ರದೇಶದಲ್ಲಿ ನಡೆದಿವೆ.

ಕೆಲಸ ಹುಡುಕಿಕೊಂಡು ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರ ಜೀವನ ಚಿಂತಾಜನಕವಾಗಿದೆ. ಕೊರೊನಾ ಲಾಕ್‍ಡೌನ್‍ನಿಂದ ತಿನ್ನಲು ಊಟವಿಲ್ಲದೇ ಊರಿಗೆ ಹೋಗಲು ಸಾರಿಗೆ ವ್ಯವಸ್ಥೆಯಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ಕಾರ್ಮಿಕ ಮಹಿಳೆಯರು ಆಸ್ಪತ್ರೆಗೆ ಹೊಗಲು ಆಗದೇ ರೈಲು, ಲಾರಿಗಳಲ್ಲೇ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮೊದಲ ಘಟನೆಯಲ್ಲಿ ಮುಂಬೈನಿಂದ ಹಿಂದಿರುಗಿದ ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಗುಂಪಿಗೆ ಸೇರಿದ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಈ ಮಹಿಳೆ ಮಧ್ಯಪ್ರದೇಶದ ಬಿಯೋರಾ ಪಟ್ಟಣದ ಬಳಿ ಲಾರಿಯಲ್ಲಿಯೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಬಸ್ತಿ ಜಿಲ್ಲೆಯ ಸಂತ ಕಬೀರ್ ನಗರದ 30 ವರ್ಷದ ಕೌಶಲ್ಯ ಪತಿ ಮನೋಜ್ ಕುಮಾರ್ ಜೊತೆ ಮುಂಬೈ ಕಾರ್ಮಿಕ ಕೆಲಸಕ್ಕೆ ಹೋಗಿದ್ದರು.

ಮುಂಬೈನಿಂದ ಟ್ರಕ್‍ನಲ್ಲಿ ಬರುವಾಗ ಹೆರಿಗೆ ಆಗಿದೆ. ನಂತರ ಅವರು ಟ್ರಕ್ ಚಾಲಕನನ್ನು ಮನವಿ ಮಾಡಿಕೊಂಡು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಮಗು ಮತ್ತು ತಾಯಿಯನ್ನು ಪರೀಕ್ಷೆ ಮಾಡಿದ ವೈದ್ಯರು, ತಾಯಿ ಮಗು ಆರೋಗ್ಯವಾಗಿ ಇದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಮಹಿಳೆಯನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಅವರನ್ನು ಊರಿಗೆ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕಾರ್ಮಿಕ ಮಹಿಳೆ ರೈಲಿನಲ್ಲೇ ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ. ಅವರು ಕೂಡ ಉತ್ತರ ಪ್ರದೇಶದವರಾಗಿದ್ದು, ಕೆಲಸ ಮಾಡಲು ಗಂಡನ ಜೊತೆ ಔರಂಗಬಾದ್‍ಗೆ ಹೋಗಿದ್ದರು ಎಂದು ತಿಳಿದು ಬಂದಿದೆ. ಲಾಕ್‍ಡೌನ್ ಆದ ಕಾರಣ ಅಲ್ಲಿ ಉಳಿದುಕೊಳ್ಳಲು ಆಗದೇ ವಿಶೇಷ ರೈಲಿನ ಮೂಲಕ ತಮ್ಮ ಸ್ವಗ್ರಾಮಕ್ಕೆ ವಾಪಸ್ ಹೋಗುತ್ತಿದ್ದರು.

ಔರಂಗಬಾದ್‍ನಿಂದ ಉತ್ತರ ಪ್ರದೇಶದ ಘಾಜಿಪುರದ ವಿಕ್ರಂಪುರ ನಿವಾಸಿ ರೇಖಾ ತನ್ನ ಪತಿ ಬ್ರಿಜೇಶ್ ಜೈಸ್ವಾಲ್ ಜೊತೆ ವಿಶೇಷ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರೈಲು ಮೈಹಾರ್‍ದಿಂದ ಉಚರಾ ನಗರಕ್ಕೆ ಬರುವಾಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ರೈಲಿನಲ್ಲಿ ಇದ್ದ ಇತರ ಮಹಿಳೆಯರು ಆಕೆಗೆ ಸಹಾಯ ಮಾಡುವ ಮೂಲಕ ರೈಲಿನಲ್ಲೇ ಹೆರಿಗೆ ಮಾಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *