ರೈಲ್ವೇ ಪ್ರಯಾಣಿಕರಲ್ಲಿ ‘ಆರೋಗ್ಯ ಸೇತು’ ಇರಲೇಬೇಕು

Public TV
1 Min Read

ನವದೆಹಲಿ: ಕೋವಿಡ್ 19 ಸಮಯದಲ್ಲಿ ವಿಶೇಷ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ. ಈಗಾಗಲೇ ಒಟ್ಟು 54 ಸಾವಿರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ.

ಆರೋಗ್ಯ ಸೇತು ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಸ್ಟೋರ್ ನಲ್ಲಿ ಲಭ್ಯವಿದೆ. ಬ್ಲೂ ಟೂತ್ ಮತ್ತು ಜಿಪಿಎಸ್ ಬಳಸಿಕೊಂಡು ಈ ಆ್ಯಪ್ ಕೋವಿಡ್ ವಲಯವಾರು ಪ್ರದೇಶಗಳ ಮಾಹಿತಿಯನ್ನು ಜನರ ಕೈಗೆ ನೀಡುತ್ತದೆ.

ಪ್ರಯಾಣಿಕರ ರೈಲುಗಳನ್ನು ಇಂದಿನಿಂದ ಹಂತ ಹಂತವಾಗಿ ಪ್ರಾರಂಭಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಆರಂಭದಲ್ಲಿ 15 ಜೋಡಿ ರೈಲುಗಳು ಓಡಾಡಲಿವೆ. ಈ ವಿಶೇಷ ರೈಲುಗಳು ನವದೆಹಲಿ ನಿಲ್ದಾಣದಿಂದ ಬೆಂಗಳೂರು, ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿವೆ.

ವಿಶೇಷ ರೈಲುಗಳ ಟಿಕೆಟ್ ಬುಕಿಂಗ್ ಮೇ 11ರಂದು ಸಂಜೆ 4 ಗಂಟೆಗೆ ಪ್ರಾರಂಭವಾಗಿದೆ. ಐಆರ್‌ಸಿಟಿಸಿ ವೆಬ್‍ಸೈಟ್‍ನಲ್ಲಿ ಮಾತ್ರ ಟಿಕೆಟ್ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳ ಕೌಂಟರ್ ಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡುವುದು ಕಡ್ಡಾಯವಾಗಿದೆ. ಕೊರೊನಾ ಸೋಂಕಿನ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೈಲು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ.

ವಿದೇಶದಿಂದ ರಾಜ್ಯಗಳಿಗೆ ಬರುತ್ತಿರುವ ವ್ಯಕ್ತಿಗಳಿಗೂ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ. ಭಾರತದ ಸಿಮ್ ಇಲ್ಲದೇ ಇದ್ದಲ್ಲಿ ಅವರಿಗೆ ಬಿಎಸ್‍ಎನ್‍ಎಲ್ ಸಿಮ್ ನೀಡಿ  ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಂತೆ ಸೂಚಿಸಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *