ರೈನಾ ಬೆನ್ನಲ್ಲೇ ಚೆನ್ನೈಗೆ ಮತ್ತೊಂದು ಹಿನ್ನಡೆ- ಮತ್ತೊಬ್ಬ ಸ್ಟಾರ್ ಆಟಗಾರ ಟೂರ್ನಿಯಿಂದ ದೂರ?

Public TV
1 Min Read

ಮುಂಬೈ: 2020ರ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರೀ ಮತ್ತೊಂದು ಹೊಡೆತ ಎದುರಾಗುವ ಸಾಧ್ಯತೆ ಇದೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ 12 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಸ್ಟಾರ್ ಆಟಗಾರ ಸುರೇಶ್ ರೈನಾ ಕೂಡ ಟೂರ್ನಿಯಿಂದ ದೂರವಾಗಿದ್ದಾರೆ. ಇದರ ನಡುವೆಯೇ ತಂಡದೊಂದಿಗೆ ಯುಎಇ ಪ್ರವಾಸದಿಂದ ಹೊರಗುಳಿದಿದ್ದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಕೂಡ ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿಗೆ ಮಾಡಿದೆ.

ಭಾರತದಲ್ಲೇ ಉಳಿದಿರುವ ಹರ್ಭಜನ್ ಸಿಂಗ್ ಅವರ ತಾಯಿಯವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಅವರು ತಂಡದೊಂದಿಗೆ ಪ್ರಯಾಣಿಸಿರಲಿಲ್ಲ. ಆದರೆ ಶೆಡ್ಯೂಲ್ ಅನ್ವಯ ಅವರು ಮಂಗಳವಾರ ಯುಎಇಗೆ ಪ್ರಯಾಣಿಸಬೇಕಿದೆ. ಆದರೆ ಈಗಾಗಲೇ ತಂಡದ ಆಟಗಾರರಿಗೆ ಕೊರೊನಾ ಸೋಂಕು ದೃಢವಾಗಿರುವ ಹಾಗೂ ರೈನಾ ಟೂರ್ನಿಯಿಂದ ಹೊರ ಬಂದ ಬೆನ್ನಲ್ಲೇ ಶ್ರೀನಿವಾಸನ್ ಅವರ ಹೇಳಿಕೆ ಹೊರ ಬಂದ ಹಿನ್ನೆಲೆಯಲ್ಲಿ ಹರ್ಭಜನ್ ಟೂರ್ನಿಯಿಂದ ದೂರ ಉಳಿಯುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಧ್ಯಮಕ್ಕೆ ಈ ಕುರಿತು ಹರ್ಭಜನ್ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಇದುವರೆಗೂ ಹರ್ಭಜನ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದೊಮ್ಮೆ ಹರ್ಭಜನ್ ಸಿಂಗ್ ತಂಡದಿಂದ ದೂರವಾದರೇ ಸಿಎಸ್‍ಕೆಗೆ ಭಾರೀ ಸಂಕಷ್ಟ ಎದುರಾಗಲಿದೆ. ತಂಡದ ಪ್ರಮುಖ ಬೌಲರ್ ದೀಪಕ್ ಚಹರ್, ಯುವ ಆಟಗಾರ ಋತು ರಾಜ್ ಕೂಡ ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕ್ವಾರಂಟೈನ್‍ನಲ್ಲಿರುವ ಆಟಗಾರರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಆದರೆ ತಂಡದ ಮಾಲೀಕ ಶ್ರೀನಿವಾಸನ್ ಮಾತ್ರ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಧೋನಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *