ರೈತ ಬಂಡಾಯದ ನೆಲೆದಲ್ಲಿ ರೈತರ ಕಹಳೆ,ಕೃಷಿ ಕಾಯ್ದೆಗಳಿಗೆ ವಿರೋಧ

Public TV
2 Min Read

– ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಗದಗ: 41ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ರೈತ ಬಂಡಾಯದ ನೆಲೆ ನರಗುಂದದಲ್ಲಿ ಮತ್ತೆ ರೈತರು ಕಹಳೆ ಮೊಳಗಿಸಿದ್ದಾರೆ. ಮಹಾದಾಯಿ ಕುಡಿಯುವ ನೀರು ಯೋಜನೆ ಅನುಷ್ಠಾನದ ಜೊತೆಗೆ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃಷಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಹಾಕುವ ಮೂಲಕ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಂಜಾಬ್‍ನ ಸಂಯುಕ್ತ ಮೊರ್ಚಾ ಸಂಘಟನೆ ಹಿರಿಯ ರೈತ ನಾಯಕ ಹರಿಖೇತ್ ಸಿಂಗ್ ಹಾಗೂ ಹರಿಯಾಣ ದೀಪಕ್ ಲಂಬಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಹರಿಖೇತ್ ಸಿಂಗ್ ಅವರು, ರೈತರನ್ನು ಭಿಕ್ಷುಕರನ್ನಾಗಿಸುವ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ದೆಹಲಿಯ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ದೇಶದ ರಾಜಧಾನಿಯಲ್ಲಿ ಅನ್ನದಾತ ಹೊತ್ತಿಸಿರುವ ಹೋರಾಟದ ಕಿಡಿ ಇದೀಗ ಬಂಡಾಯದ ನೆಲೆ ನರಗುಂದಕ್ಕೂ ತಲುಪಿದೆ. ಈ ಮೂಲಕ ದಕ್ಷಿಣ ಭಾರತದ ಎಲ್ಲ ಜಿಲ್ಲೆ ಮತ್ತು ಗ್ರಾಮಗಳಿಗೂ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ತಲುಪಬೇಕು. ಈ ನಿಟ್ಟಿನಲ್ಲಿ ರೈತ ಹೋರಾಟದ ಜನ್ಮಸ್ಥಾನವಾಗಿರುವ ನರಗುಂದಲ್ಲಿ ಎಲ್ಲಾ ರೈತ ನಾಯಕರು ಹಾಗೂ ಪ್ರಗತಿಪರರ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆ ಜಾರಿಗೆ ಸುಪ್ರೀಂ ತಡೆ

ದೀಪಕ್ ಲಂಬಾ ಮಾತನಾಡಿ, ನರಗುಂದ- ನವಲಗುಂದ ರೈತರ ಪುಣ್ಯಭೂಮಿಯಾಗಿದೆ. ಈ ಭಾಗದ ರೈತರು ಮಹಾದಾಯಿ ನೀರಿಗಾಗಿ ಸುದೀರ್ಘವಾಗಿ ಹೋರಾಟ ನಡೆಸುತ್ತಿದ್ದಾರೆ. ಇಷ್ಟೊಂದು ದೀರ್ಘಾವಧಿ ಹೋರಾಟ ದೇಶದಲ್ಲಿ ಮತ್ತೊಂದಿಲ್ಲ. ಅದರಂತೆ ದೆಹಲಿಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಚಳವಳಿ ನಡೆಸುತ್ತಿದ್ದಾರೆ. ಇಷ್ಟು ದೀರ್ಘಾ ಕಾಲ ರಾಜಧಾನಿಯಲ್ಲಿ ಮತ್ಯಾವ ಹೋರಾಟವೂ ನಡೆದಿಲ್ಲ. ಆದರೂ, ಆಳುವ ಸರ್ಕಾರಗಳು ಅನ್ನದಾತನ ಪರ ಕಣ್ಣು ತೆರೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ವೇದಿಕೆ ಮೇಲೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಮಾಜಿ ವಿಧಾನಸಭಾ ಪರಿಷತ್ ಬಿ.ಆರ್.ಪಾಟೀಲ್, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ, ಕಳಸಾ ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ, ಮದುಸೂಧನ್ ತಿವಾರಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನರಗುಂದ, ನವಲಗುಂದ ಸೇರಿದಂತೆ ವಿವಿಧ ಭಾಗದಿಂದ ಅಪಾರ ಸಂಖ್ಯೆಯಲ್ಲಿ ರೈತರು ಭಾಗವಹಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *