ರೈತರ ಪಾಲಿಗೆ ಸಿಹಿಯಾದ ಬೇವು

Public TV
1 Min Read

ಕೊಪ್ಪಳ : ಈ ವರ್ಷ ಮುಂಗಾರು ಮಳೆಯಿಲ್ಲದೆ ಕಂಗಾಲಾಗಿದ್ದ ರೈತರ ಪಾಲಿಗೆ ಬೇವು ಈ ವರ್ಷ ಸಿಹಿಯಾಗಿದೆ.

ಮುಂಗಾರು ಮಳೆಗಳಲ್ಲಿಯೇ ಬೀಜ ಮಳೆ ಎಂದು ಹೆಸರಾಗಿರುವ ರೋಹಿಣಿ ಮಳೆ ಈ ವರ್ಷ ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಕಂಗಾಲಾಗಿ ಕೈಕಟ್ಟಿ ಕುಳಿತುಕೊಂಡಿರುವ ಈ ಸಂದರ್ಭದಲ್ಲಿ ರೈತರ ಬಾಳೀಗೆ ಸಿಹಿಯಾಗಿ ಬಂದಿದ್ದು, ಬೇವಿನ ಬೀಜ ಎಂದರೆ ತಪ್ಪಾಗಲಾರದು. ಅತ್ಯಂತ ಕಹಿಯಾಗಿರುವ ಮತ್ತು ಔಷಧ ಗುಣಗಳನ್ನು ಹೊಂದಿರುವ ಬೇವು ಮಾತ್ರ (ಬೇವಿನ ಬೀಜ) ರೈತರ ಜೀವನಕ್ಕೆ ಆಸರೆ ಆಗಿರುವುದಂತು ಸತ್ಯ.

ಈ ವರ್ಷ ಅದರಲ್ಲಿ ವಿಶೇಷವಾಗಿ ಕೊರೊನಾ ವೈರಸ್ ತಡೆಗಾಗಿ ಸರ್ಕಾರ ಜಾರಿಗೆ ಬಂದಿದ್ದ ಲಾಕ್‍ಡೌನ್ ಸಮಯ ಅಲ್ಲದೆ ಇನ್ನೂಳಿದ ದಿನಗಳಲ್ಲಿ ಕೆಲಸಗಳಿಲ್ಲದೆ ಖಾಲಿ ಕುಳಿತುಕೊಂಡಿದ್ದ ರೈತರಿಗೆ ಪಾಲಿಗೆ ಬೇವಿನ ಹಣ್ಣು (ಬೀಜ) ರೈತರ ಜೀವನದ ಮೂಲ ಆಸರೆಯಾಗಿದೆ.

ಹೆಚ್ಚು ಆವಕ: ಕೊಪ್ಪಳ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಆವಕವಾಗುವುದು ಕುಷ್ಟಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂಬುವುದು ವಿಶೇಷವಾಗಿದೆ. ಈ ಭಾಗದಲ್ಲಿ ಹೇರಳವಾಗಿ ಬೇವಿನ ಮರಗಳು ಹೊಂದಿರುವ ಕಾರಣಕ್ಕಾಗಿ ಬೇವಿನ ಹಣ್ಣು ಸೇರಿದಂತೆ ಬೇವಿನ ಬೀಜ ಮಾರುಕಟ್ಟೆಯಲ್ಲಿ ಹೆಚ್ಚು ಆವಕವಾಗುತ್ತವೆ. ನಿತ್ಯ ಒಂದು ಚೀಲಗಳಷ್ಟು ಒಬ್ಬ ರೈತ ಮಹಿಳೆಯರು ಬೇವಿನ ಬೀಜಗಳು ಸೇರಿದಂತೆ ಹಣ್ಣುಗಳನ್ನು ಸಂಗ್ರಹಿಸುತ್ತಾರೆ. ಚೀಲವೊಂದಕ್ಕೆ ಕನಿಷ್ಠ 500 ರಿಂದ 600 ರೂಪಾಯಿಗಳವರೆಗೆ ಈ ವರ್ಷ ದರ ಲಭಿಸಿದೆ.

ಇಲ್ಲಿಯವರೆಗೂ 4,418 ಕ್ವಿಂಟಲ್ ನಷ್ಟು ಮಾರುಕಟ್ಟೆಗೆ ಬೇವಿನ ಹಣ್ಣು ಸೇರಿದಂತೆ ಬೀಜ ಆವಕವಾಗಿದೆ. ಇನ್ನೂ 15 ದಿನಗಳಿಂದ ತಿಂಗಳವರೆಗೆ ಬೇವಿನ ಹಣ್ಣು ಮಾರುಕಟ್ಟೆಗೆ ಆವಕವಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಸಾವಿರದಿಂದ 1500 ಕ್ವಿಂಟಲ್ ಬೇವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಟಿ.ನೀಲಪ್ಪಶೆಟ್ಟಿ ತಿಳಿಸಿದರು.

ರಾಜ್ಯವಲ್ಲದೆ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ರಫ್ತಾಗಲಿದೆ. ಔಷಧಕ್ಕಾಗಿ ಬಳಕೆಯಾಗುವ ಬೇವು ರೈತರ ಜಮೀನು ಫಲವತ್ತತೆಗಾಗಿ ಬೇವಿನ ಗೊಬ್ಬರವಾಗಿ ಮರಳಿ ತಯಾರಾಗಿ ಬರಲಿದೆ ಎಂದು ಕಾರ್ಯದರ್ಶಿಗಳು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *