ರೈತರ ಆದಾಯ ದ್ವಿಗುಣ ಮಾಡ್ತೇವೆ ಎಂದಿದ್ದ ಪ್ರಧಾನಿ ವಿರುದ್ಧ ಹೆಚ್‍ಡಿಕೆ ಕಿಡಿ

Public TV
2 Min Read

ಬೆಂಗಳೂರು: ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೆಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡುವುದಾಗಿ ಮೋದಿ ಹೇಳಿದ್ದರು. ಆದರೆ, 2021ರ ವೇಳೆಗೆ ರೈತರ ಕೃಷಿ ಖರ್ಚು-ವೆಚ್ಚ ದುಪ್ಪಟ್ಟಾಗಿದೆ. ರಸಗೊಬ್ಬರ ಬೆಲೆ ಏರಿದೆ. ರೈತರು ಬೋರ್‍ವೆಲ್ ಕೊರೆಸಲಾಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯು ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಆದಾಯ ದ್ವಿಗುಣ ಎಲ್ಲಿ? ಎಂದು ಪ್ರಶ್ನಿಸಿದರು.

ಇವತ್ತಿನ ಲೆಕ್ಕಾಚಾರದ ಪ್ರಕಾರ ರೈತರು ಬೋರ್‍ವೆಲ್ ಕೊರೆಸಬೇಕಿದ್ದರೆ, 1-2ಲಕ್ಷ ಖರ್ಚು ಮಾಡಬೇಕು. ಪಿವಿಸಿ ಪೈಪ್‍ಗಳ ದರ ದುಪ್ಪಟ್ಟಾಗಿದೆ, ಮೋಟರ್ ಬೆಲೆಯಲ್ಲಿ ಜಿಗಿತವಾಗಿದೆ. ಕೃಷಿ ಪಂಪ್ ಸೆಟ್‍ಗಳಿಗೆ ರೈತರಾದವರೇ ಶೇ.18ರಷ್ಟು ಜಿಎಸ್‍ಟಿ ಪಾವತಿಸಬೇಕಿರುವುದು ವಿಷಾದಕರ. ಇದು ಕೃಷಿಗೆ ಪೂರಕ ಸ್ಥಿತಿಯೇ ಎಂಬುದರ ಅವಲೋಕನೆಯಾಗಬೇಕಿದೆ ಎಂದು ತಿಳಿಸಿದರು.

ಕೃಷಿ ಪರಿಕರಗಳ ಬೆಲೆ ಏರಿಕೆ ಬಗ್ಗೆ ರಾಜ್ಯದ ಕೃಷಿ ಸಚಿವರು ನೀಡಿರುವ ಹೇಳಿಕೆ ಇಂತಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಹೆಚ್ಚಳಕ್ಕೆ ರೈತರು ಹೊಂದಿಕೊಳ್ಳಬೇಕು ಎಂದಿದ್ದಾರೆ. ರೈತರ ಕಷ್ಟ ನೀಗಿಸಬೇಕಾದವರು ಬೇಜವಾಬ್ದಾರಿತನ ತೋರುವುದು ಬೇಸರದ ವಿಚಾರ ಎಂದು ವಿಷಾದ ವ್ಯಕ್ತಪಡಿಸಿದರು.

ಕೃಷಿಯಲ್ಲಿ ಆದಾಯ ಗಳಿಸುವುದು ಇರಲಿ, ಕೃಷಿ ಮಾಡಲೇ ರೈತ ಸಂಕಷ್ಟ ಅನುಭವಿಸಬೇಕಾಗಿರುವುದು ಇವತ್ತಿನ ದುರಂತ. ಇದನ್ನು ನಿವಾರಿಸಲಾಗದೇ ಇರುವುದು ರೈತರ ಆದಾಯ ದ್ವಿಗುಣ ಮಾಡುವ ಕ್ರಮವೇ ಎಂಬುದರ ಬಗ್ಗೆ ಮೋದಿ ಅವರು ಉತ್ತರಿಸಬೇಕು. ಪರಿಸ್ಥಿತಿ ಹೀಗಿದ್ದು, ಸಮಾವೇಶದಲ್ಲಿ ರೈತರ ಕಲ್ಯಾಣದ ಬಗ್ಗೆ ಮೋದಿ ಅವರು ಆಡುವ ಮಾತುಗಳು ಪ್ರಾಮಾಣಿಕವೇ? ಎಂದು ಕಿಡಿ ಕಾರಿದರು.

ಪ್ರಧಾನಿ ಮೋದಿ ಅವರು ಬಂಗಾಳದ ಏಕಗವಾಕ್ಷಿ ವ್ಯವಸ್ಥೆ ಬಗ್ಗೆ ಮಾತಾಡಿದ್ದಾರೆ. ದೇಶದಲ್ಲಿ ಅಭಿವೃದ್ಧಿಗೆ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದೂ, ಬಂಗಾಳದಲ್ಲಿ ಮಮತ ಅಳಿಯ ಕೇಂದ್ರಿತ ಏಕಗವಾಕ್ಷಿ ವ್ಯವಸ್ಥೆ ಇದೆ ಎಂದು ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾವ ಏಕಗವಾಕ್ಷಿ ವ್ಯವಸ್ಥೆ ಇದೆ? ಮೋದಿ ಉತ್ತರಿಸುವರೇ? ಎಂದು ಹರಿಹಾಯ್ದರು.

ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಕುರ್ಚಿ ಹಿಂದೆ ಅಡಗಿ ಕುಳಿತಿರುವ, ರಾಜ್ಯದ ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ಬಗ್ಗೆ ಬಿಜೆಪಿಯ ಹಿರಿಯ ಶಾಸಕರೇ ಹಾದಿ ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಯಡಿಯೂರಪ್ಪ ಕುಟುಂಬದ ಅಕ್ರಮದ ಬಗ್ಗೆ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಸ್ವಘೋಷಿತ ಮಹಾನಾಯಕ-ಏಕಗವಾಕ್ಷಿ ಬಗ್ಗೆ ಮೋದಿ ಮಾತಾಡುವರೇ? ಎಂದು ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಸರ್ಕಾರದಲ್ಲೇ ಏಕಗವಾಕ್ಷಿ ಯೊಂದು ಇರುವಾಗ, ಅದನ್ನು ಉದ್ದೇಶಪೂರ್ವಕವಾಗಿ ಪೋಷಿಸುತ್ತಿರುವಾಗ ಮೋದಿ ಅವರು ಮಮತ ಬಗ್ಗೆ ಟೀಕಿಸುವುದು ಆತ್ಮವಂಚನೆ. ರಾಜ್ಯದ ಜನರ ತೆರಿಗೆ ಹಣ, ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ನುಂಗಿಹಾಕುತ್ತಿರುವ, ಬಿಜೆಪಿ ಸರ್ಕಾರದ ‘ಏಕಗವಾಕ್ಷಿ’ ವ್ಯವಸ್ಥೆಯನ್ನು ಮೋದಿ ಮೊದಲು ಕೊನೆಗಾಣಿಸಲಿ ಎಂದು ಹೆಚ್‍ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *