ರೈತರು, ಆಶಾಕಾರ್ಯಕರ್ತೆಯರಿಗೆ 512.5 ಕೋಟಿಯ ವಿಶೇಷ ಪ್ಯಾಕೇಜ್ ಫೋಷಿಸಿದ ಸಿಎಂ

Public TV
2 Min Read

– ನನ್ನಿಂದ ಅನ್ನದಾತರಿಗೆ ಅನ್ಯಾಯ ಆಗಲ್ಲ ಎಂದ ಬಿಎಸ್‍ವೈ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ರೈತರಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಫೋಷಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ್, ಲಕ್ಷ್ಮಣ್ ಸವದಿ ಸೇರಿದಂತೆ ಹಲವು ಸಚಿವರ ದಂಡಿನೊಂದಿಗೆ ಸಿಎಂ ಸುದ್ದಿಗೋಷ್ಠಿ ನಡೆಸಿದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿವೆ. ನಾನು ರೈತಪರ ಬಜೆಟ್ ಮಂಡಿಸಿದವನು. ಹಸಿರು ಶಾಲು ಹಾಕಿ ಪ್ರಮಾಣವಚನ ಸ್ವೀಕರಿಸಿದವನು. ನನ್ನಿಂದ ರೈತರಿಗೆ ಅನ್ಯಾಯ ಆಗಲ್ಲ. ರೈತರ ಉತ್ಪನ್ನಗಳು ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗಳನ್ನು ಮಾಡಿದ್ದಾರೆ. ಶಿಕಾರಿಪುರದಲ್ಲಿ 45 ವರ್ಷಗಳ ಹಿಂದೆ ಎಪಿಎಂಸಿ ಮುಂದೆ ರೈತರು ಬೆಳೆದ ಬೆಳೆಗೆ ನಾನು ಹೋರಾಟ ಮಾಡಿದ್ದೆ. ರೈತ ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದ್ದೇವೆ. ಈ ಕಾಯ್ದೆಯಿಂದ ಎಪಿಎಂಸಿ ಸಮಿತಿಗಳಿಗೆ ಯಾವುದೇ ದಕ್ಕೆ ಆಗಲ್ಲ ಎಂದು ಸಿಎಂ ಭರವಸೆ ನೀಡಿದರು. ಇದನ್ನೂ ಓದಿ: ಹಣ್ಣು, ತರಕಾರಿ ಬೆಳೆಗಾರರಿಗೆ 15 ಸಾವಿರ ರೂ.- ಬಿಎಸ್‍ವೈಯಿಂದ ಮತ್ತೆ 162 ಕೋಟಿ ಪ್ಯಾಕೇಜ್ ಪ್ರಕಟ

ರೈತರಿಗೆ ಪ್ಯಾಕೇಜ್:
ಖಾಸಗಿ ಮಾರುಕಟ್ಟೆ 2007ರಲ್ಲೇ ಪ್ರಾರಂಭವಾಗಿದೆ. ಈಗಾಗಲೇ ಆನ್‍ಲೈನ್ ಮಾರುಕಟ್ಟೆ ಕೂಡ ಬಂದಿದೆ. ಎಲ್ಲಾ ಪ್ರತಿಪಕ್ಷಗಳ ಜತೆ ಮಾತನಾಡಿ ತಪ್ಪು ಗ್ರಹಿಕೆ ಮಾಡಬಾರದು ಎಂದು ಹೇಳಿದ್ದೇನೆ. ಹೀಗಾಗಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದ್ದು, ಮೆಕ್ಕೆಜೋಳ ಬೆಳೆದ ರೈತನಿಗೆ ಬೆಂಬಲ ಬೆಲೆ ನೀಡಲಾಗುತ್ತದೆ. ರಾಜ್ಯದಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆದ ರೈತರು ಇದ್ದಾರೆ. ಒಬ್ಬ ರೈತನಿಗೆ 5 ಸಾವಿರ ಎನ್ನುವಂತೆ ಒಟ್ಟು 500 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ ಹಾಗೆಯೇ ಅಪಘಾತ, ನೈಸರ್ಗಿಕ ವಿಕೋಪಕ್ಕೆ ತುತ್ತಾದ ಮೃತ ಪಟ್ಟ ಕುರಿ ಮೇಕೆಗಳಿಗೆ 5 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಬೀದಿಬದಿ ವ್ಯಾಪಾರಿಗಳಿಗೆ ಸಾಲ – 5 ಸಾವಿರ ಕೋಟಿ ರೂ. ಪ್ಯಾಕೇಜ್ ಪ್ರಕಟ

ಆಶಾ ಕಾರ್ಯಕರ್ತೆಯರಿಗೆ ಪ್ಯಾಕೇಜ್:
40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಎನ್ನುವಂತೆ 12.5 ಕೋಟಿಯ ಪ್ಯಾಕೇಜ್ ಘೋಷಿಸಲಾಗಿದೆ. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂಪಾಯಿ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

ಕೊರೊನಾ ಲಾಕ್‍ಡೌನ್ ಬಳಿಕ ರಾಜ್ಯ ಸರ್ಕಾರದ ಈವರಗೆ ಮೂರು ಪ್ಯಾಕೇಜ್‍ಗಳನ್ನು ಘೋಷಿಸಿದೆ. ಒಟ್ಟು 2,274.5 ಕೋಟಿಯ ಪ್ಯಾಕೇಜ್ ಅನ್ನು ಘೋಷಿಸಿದೆ. ಮೊದಲ ಹಂತದ ಪ್ಯಾಕೇಜ್‍ನಲ್ಲಿ 1,610 ಕೋಟಿ ರೂಪಾಯಿ, ಎರಡನೇ ಹಂತದ ಪ್ಯಾಕೇಜ್‍ನಲ್ಲಿ 162 ಕೋಟಿ ರೂಪಾಯಿ, ಮೂರನೇ ಹಂತದಲ್ಲಿ 512.5 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ.

Share This Article
Leave a Comment

Leave a Reply

Your email address will not be published. Required fields are marked *