ರೈತರಿಂದ ಗ್ರಾಹಕರಿಗೆ ನೇರ ವ್ಯಾಪಾರ – ಕೊಪ್ಪಳದಲ್ಲಿ ಸಿದ್ಧಗೊಂಡಿದೆ ಮಾರುಕಟ್ಟೆ

Public TV
2 Min Read

– ಮಧ್ಯವರ್ತಿಗಳ ಹಾವಳಿಯಿಲ್ಲ, ಕಮಿಷನ್ ಇಲ್ಲ
– ಪ್ರತಿ ಗುರುವಾರ ಮಾರುಕಟ್ಟೆ ನಡೆಸಲು ಯೋಜನೆ

ಕೊಪ್ಪಳ: ರೈತ ಹಾಗೂ ಗ್ರಾಹಕನ ನಡುವೆ ನೇರ ವ್ಯಾಪಾರ ವಹಿವಾಟು ಏರ್ಪಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕೊಪ್ಪಳದಲ್ಲೊಂದು ಮೊಟ್ಟ ಮೊದಲ ಬಾರಿಗೆ ರೈತರ ಮಾರುಕಟ್ಟೆ ಸಿದ್ದಗೊಂಡಿದೆ.

ಸಾವಯವ, ಶುದ್ಧ ಉತ್ಪನ್ನಗಳನ್ನು ರೈತ ನಿಗದಿ ಮಾಡಿದ ದರದಲ್ಲಿ ಗ್ರಾಹಕನಿಗೆ ಮಾರಾಟ ಮಾಡಲು ಸಮನ ಮನಸ್ಕರ ಸಮಿತಿ ಗುರುವಾರ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾರುಕಟ್ಟೆ ಏರ್ಪಡಿಸಲು ನಿರ್ಧರಿಸಿದೆ.

ಬಿಸಿಲು, ಮಳೆ, ಚಳಿ ಎನ್ನದೇ ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸಿಗದೆ ಸಂಕಷ್ಟ ಎದುರಿಸುವಂತ ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಸಮಾನ ಮನಸ್ಕರ ಬಳಗ ಈಚೆಗೆ ಕೂಡಿಕೊಂಡು ಮಣ್ಣಿನೊಂದಿಗೆ ಮಾತುಕತೆ ಆರಂಭಿಸಿತ್ತು. ಪ್ರತಿ ವಾರ ರೈತರ ಜಮೀನಿಗೆ ಭೇಟಿ ನೀಡಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸುವ ವೇಳೆ ರೈತರ ಮಾರುಕಟ್ಟೆ ಸ್ಥಾಪನೆಯ ವಿಚಾರವು ಪ್ರಸ್ತಾಪಕ್ಕೆ ಬಂದು ಇದೇ ಜ.26 ರಂದು ರೈತರ ಮಾರುಕಟ್ಟೆ ಲೋಕಾರ್ಪಣೆ ಮಾಡಲು ಸಿದ್ಧತೆ ನಡೆದಿದೆ.

ಪ್ರಸ್ತುತ ವಿಷಯುಕ್ತ ಆಹಾರವನ್ನೇ ಸೇವಿಸುತ್ತಿದ್ದೇವೆ. ಪೌಷ್ಠಿಕ, ಸಾವಯವ ಆಹಾರವು ಶ್ರೀಮಂತರಿಗೆ ಮಾತ್ರ ಎನ್ನುವಂತೆ ಬಿಂಬಿತವಾಗುತ್ತಿದೆ. ಇದನ್ನು ಸರ್ವರೂ ಬಳಕೆ ಮಾಡಬೇಕು. ವಿಷಮುಕ್ತ ಆಹಾರವನ್ನು ದೂರ ಮಾಡಿ, ಶುದ್ಧತೆಯಿಂದ ಕೂಡಿರುವ ಪೌಷ್ಠಿಕ ಆಹಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಮಾನ ಮನಸ್ಕರ ಬಳಗವು ಹೊಸ ಪರಿಕಲ್ಪನೆಯಡಿ ರೈತರು ಹಾಗೂ ಗ್ರಾಹಕರ ನಡುವೆ ಬಾಂಧವ್ಯ ಬೆಳೆಸಲು ಈ ರೈತ ಮಾರುಕಟ್ಟೆ ಸ್ಥಾಪನೆ ಮಾಡಿದೆ.

 

ಕೊಪ್ಪಳ ರೈತ ಮಾರುಕಟ್ಟೆ ಸಮಿತಿಯು ನೊಂದಣಿಯಾಗಿದ್ದು, ಮಾರುಕಟ್ಟೆಯ ನಿರ್ವಹಣೆ ನೋಡಿಕೊಳ್ಳಲಿದೆ. ಇದು ಲಾಭದಾಯಕವಲ್ಲ. ರೈತನ ಉತ್ಪನ್ನದ ಜೊತೆಗೆ ಗ್ರಾಹಕರಿಗೆ ಶುದ್ಧ ಉತ್ಪನ್ನ ಸಿಗಬೇಕೆನ್ನುವುದು ಮೂಲ ಉದ್ದೇಶವಾಗಿದೆ. ವಿಜ್ಞಾನಿಗಳ, ಕೃಷಿ ತಜ್ಞರ ಹಾಗೂ ಅನುಭವಿ ರೈತರ ಸಲಹೆ, ಮಾರ್ಗದರ್ಶನದ ಮೇರೆಗೆ ರೈತರಿಂದಲೇ ಮಾರುಕಟ್ಟೆ ರಚನೆಯಾಗಿದೆ.

ಇಲ್ಲಿ ಯಾವ ಮಧ್ಯವರ್ತಿಗಳಿರಲ್ಲ, ಕಮಿಷನ್ ಆಟವೂ ನಡೆಯಲ್ಲ. ಗ್ರಾಹಕನಿಂದ ಬಂದ ಎಲ್ಲ ಹಣವೂ ನೇರ ರೈತರಿಗೆ ಸಿಗಲಿದೆ. ಜ.26 ರಂದು ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ರೈತರ ಮಾರುಕಟ್ಟೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

20 ರೈತರು ನೊಂದಣಿ :
ಮಣ್ಣಿನೊಂದಿಗೆ ಮಾತುಕತೆಯಲ್ಲಿ ಪಾಲ್ಗೊಳ್ಳುವ ರೈತ ಸಮೂಹದಲ್ಲಿ ರೈತರ ಮಾರುಕಟ್ಟೆಯಲ್ಲಿ ತಮ್ಮ ಶುದ್ಧ ಉತ್ಪನ್ನಗಳನ್ನು ಮಾರಾಟ ಮಾಡಲು 20 ರೈತರು ಮುಂದೆ ಬಂದು ಸಮಿತಿಯಲ್ಲಿ ಹೆಸರನ್ನು ನೊಂದಾಯಿಸಿ ಗ್ರಾಹಕರಿಗೆ ಶುದ್ಧ ಉತ್ಪನ್ನಗಳನ್ನು ಕೊಡಲು ಸಿದ್ದವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರ ಮೂಲಕ ಚಾಲನೆ ಕೊಡಿಸಲು ವ್ಯವಸ್ಥೆ ಮಾಡಲಾಗಿದೆ.

ಏನು ಸಿಗುತ್ತೆ?
ರೈತರ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪು, ಹಣ್ಣು, ದೇಸಿಯ ತಳಿ ಅಕ್ಕಿ, ಸಿರಿಧಾನ್ಯ, ಬೇಳೆಕಾಳು ಮೌಲ್ಯವರ್ಧಿತ ಉತ್ಪನ್ನಗಳು ಮಾರಾಟಕ್ಕೆ ಇರಲಿವೆ. ವಿಷಮುಕ್ತ ಉತ್ಪನ್ನಗಳು ಈ ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾವಯವ ಬೆಳೆಯ ಉತ್ಪನ್ನಗಳೇ ಮಾರಾಟವಾಗಲಿವೆ.

ಒಟ್ಟಿನಲ್ಲಿ ಮಣ್ಣಿನೊಂದಿಗೆ ಮಾತುಕತೆ ನಡೆಸುವ ವೇಳೆ ಇಂತಹ ಆಲೋಚನೆ ಬಂದು ರೈತ-ಗ್ರಾಹಕರಿಗೆ ನೆರವಾಗುವಂತಹ ರೈತರ ಮಾರುಕಟ್ಟೆಯು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾಗುತ್ತಿರುವುದು ನಿಜಕ್ಕೂ ಅನ್ನದಾತ ವಲಯಕ್ಕೆ ಸಂತಸ ತರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *