ರೈತನ ಮಗ ಈಗ ಕೆಪಿಎಸ್‍ಸಿ ಸದಸ್ಯ

Public TV
1 Min Read

ಬೆಂಗಳೂರು: ರೈತ ಕುಟುಂಬದಲ್ಲಿ ಹುಟ್ಟಿ, ಉತ್ತಮ ಶಿಕ್ಷಣ ಪಡೆದು, ವಿದೇಶದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿದ ಪಿಹೆಚ್‍ಡಿ ಪದವೀಧರ, ಪ್ರಸ್ತುತ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾ. ಬಿ. ಪ್ರಭುದೇವ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

ಡಾ. ಬಿ. ಪ್ರಭುದೇವ್ ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದವರು. ದಿ. ಬಸವೇಗೌಡ ಹಾಗೂ ದಿ. ಕೆಂಪಮ್ಮ ಅವರ ಪುತ್ರ ಡಾ. ಪ್ರಭುದೇವ್ ಪಾಂಡವಪುರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯ ಪಿಇಎಸ್ ಕಾಲೇಜಿನಲ್ಲಿ ಬಿ.ಇ. ಪದವಿ, ಮೈಸೂರಿನ ವಿವಿಯಲ್ಲಿ ವ್ಯವಹಾರ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಹೆಚ್‍ಡಿ ಪದವಿ ಪಡೆದರು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು ಕನ್ನಡ ಮಾಧ್ಯಮದಲ್ಲಿ ಕರ್ನಾಟಕ ಆಡಳಿತ ಸೇವೆ ಪರೀಕ್ಷೆ ಬರೆದಿರುವ ಇವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ, ಕರಕುಶಲ ಅಭಿವೃದ್ಧಿ ನಿಗಮ, ಹಟ್ಟಿ ಚಿನ್ನದ ಗಣಿ, ಪರಿಸರ ಪ್ರವಾಸೋದ್ಯಮ ನಿಗಮಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅಮೆರಿಕದ ಡೆಟ್ರಾಯಿಟ್ ನಲ್ಲಿರುವ ಫೋರ್ಡ್ ಮೋಟಾರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ, ಶ್ಲಾಘನಾ ಪತ್ರವನ್ನೂ ಪಡೆದಿದ್ದಾರೆ. ಎ.ಎಸ್.ಕ್ಯೂ. ಸಂಸ್ಥೆಯಿಂದ ಸರ್ಟಿಫೈಡ್ ಕ್ವಾಲಿಟಿ ಇಂಜಿನಿಯರ್ ವಿಷಯದಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. ಅಮೆರಿಕದ ಕನ್ನಡ ಕೂಟಗಳ ಆಗರ, ಒಕ್ಕಲಿಗ ಪರಿಷತ್ ಆಗರ, ಉತ್ತರ ಅಮೇರಿಕದ ವೀರಶೈವ ಸಮಾಜ ಆಗರ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ. ಪ್ರಭುದೇವ್ ಅವರನ್ನು ರಾಜ್ಯ ಸರ್ಕಾರ ಕೆಪಿಎಸ್‍ಸಿ ಸದಸ್ಯರನ್ನಾಗಿ ನೇಮಿಸಿದೆ.

Share This Article
Leave a Comment

Leave a Reply

Your email address will not be published. Required fields are marked *