ರೈತನಾಯಕ ರಾಕೇಶ್ ಟಿಕಾಯತ್ 80 ಕೋಟಿ ಆಸ್ತಿಯ ಒಡೆಯ

Public TV
2 Min Read

– ಆರಂಭದಲ್ಲಿ ದೆಹಲಿ ಕಾನ್‍ಸ್ಟೇಬಲ್ ಹುದ್ದೆ
– ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ

ನವದೆಹಲಿ: ಕೃಷಿ ಕಾಯ್ದೆಯ ವಿರುದ್ಧ ಉತ್ತರ ಪ್ರದೇಶದ ಘಾಜಿಪುರ ಗಡಿಯಲ್ಲಿ ಹೋರಾಟ ಮಾಡುತ್ತಿರುವ ಭಾರತ್ ಕಿಸಾನ್ ಯೂನಿಯನ್ ಸಂಘಟನೆಯ ನಾಯಕನಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕಾಯತ್ 80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ವಿಚಾರ ಈಗ ಪ್ರಕಟವಾಗಿದೆ.

ಕಳೆದ ಎರಡು ತಿಂಗಳಿನಿಂದ 40 ಕ್ಕೂ ಹೆಚ್ಚು ಸಂಘಟನೆಗಳು ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಟ್ಟು ಬಿಡದೆ ಹೋರಾಟ ನಡೆಸುತ್ತಿದೆ. ಇದರೊಂದಿಗೆ ಜನವರಿ 26ರಂದು ನಡೆದ ಹಿಂಸಾಚಾರದ ಬಳಿಕ ಕೆಲವು ರೈತ ಸಂಘಟನೆಗಳು ಹೋರಾಟದಿಂದ ಹಿಂದೆ ಸರಿದರೆ ಇತ್ತ ರಾಕೇಶ್ ಟಿಕಾಯತ್ ಮುಂದಾಳತ್ವದಲ್ಲಿ ಬಿಕೆಯು ಪಟ್ಟು ಬಿಡದೇ ದಿನೇ ದಿನೇ ವಿಭಿನ್ನರೀತಿಯ ಪ್ರತಿಭಟನೆ ಮಾಡುತ್ತಿದೆ.

ಹೊಸ ಹೊಸ ಪ್ರತಿಭಟನೆಯ ಮೂಲಕ ಬಾರಿ ಚರ್ಚೆಗೆ ಕಾರಣರಾಗಿರುವ ರೈತ ಸಂಘದ ನಾಯಕನಾಗಿ ಗುರುತಿಸಿಕೊಂಡಿರುವ ಟಿಕಾಯತ್ ಅವರ ಆಸ್ತಿ ವಿವರ ಇದೀಗ ಬಾರಿ ಸದ್ದು ಮಾಡುತ್ತಿದೆ. ಮಾಧ್ಯಮವೊಂದು ವರದಿ ಮಾಡಿರುವಂತೆ ಟಿಕಾಯತ್ ಬರೋಬ್ಬರಿ 80 ಕೋಟಿ ಒಡೆಯನಾಗಿದ್ದು, ಉತ್ತರ ಪ್ರದೇಶ, ಮಹಾರಾಷ್ಟ್ರ, ದುಬೈ, ಉತ್ತರ್‍ಖಾಂಡ್, ದೆಹಲಿ ಸೇರಿದಂತೆ, ಪ್ರಮುಖ 13 ನಗರಗಳಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಮುಜಾಫರನಗರ, ಲಲಿತ್‍ಪುರ, ಝಾನ್ಸಿ, ಲಖಿಮ್‍ಪುರ ಖೇರಿ, ಬಿಜ್ನೂರ್, ಬದನ್, ಡೆಲ್ಲಿ, ನೊಯ್ಡಾ, ಘಾಜಿಪುರ, ಡೆಹ್ರಾಡೊನ್, ರೊರ್ಕೀ, ಹರಿದ್ವಾರ ಮತ್ತು ಮುಂಬೈನಲ್ಲಿ ಟಿಕಾಯತ್ ತಮ್ಮ ಆಸ್ತಿಯನ್ನು ಹೊಂದಿದ್ದಾರೆ.

ಟಿಕಾಯತ್ ರೈತ ನಾಯಕನಾಗವುದರೊಂದಿಗೆ ಉದ್ಯಮಿ ಆಗಿದ್ದಾರೆ. ಪೆಟ್ರೋಲ್ ಬಂಕ್, ಶೋರೂಮ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.

ಮೂಲತಃ ಉತ್ತರ ಪ್ರದೇಶದ ಮುಜಾಫರನಗರದ ಸಿಸಾವುಲಿ ಪಟ್ಟಣದಲ್ಲಿ ಹುಟ್ಟಿದ ರಾಕೇಶ್ ಟಿಕಾಯತ್, ರೈತ ಹೋರಾಟ ಕುಟುಂಬದ ಕುಡಿಯಾಗಿದ್ದಾರೆ. ಬಿಕೆಯು ಸಹ ಸಂಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನಾಗಿ ಜನಿಸಿ ಇದೀಗ ಬಿಕೆಯು ವಕ್ತಾರರಾಗಿ ರೈತ ಹೋರಾಟವನ್ನು ಮಾಡುತ್ತಿದ್ದರೆ, ಇವರ ಹಿರಿಯಣ್ಣ ನರೇಶ್ ಟಿಕಾಯತ್ ಬಿಕೆಯುನ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ರಾಕೇಶ್ ಟಿಕಾಯತ್‍ಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ ಅವರೂ ಕೂಡ ರೈತರ ಪ್ರತಿಭಟನೆಗೆ ಸಹಕಾರ ಮಾಡುತ್ತಿದ್ದು ಫೆಬ್ರವರಿ 8ರಂದು ಮೆಲ್ಬೋರ್ನ್‍ನಲ್ಲಿ ನಡೆದ ರೈತ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು ಎಂದು ವರದಿಯಾಗಿದೆ.

ರಾಕೇಶ್ ಟಿಕಾಯತ್ ಮಾಸ್ಟರ್ ಡಿಗ್ರಿ ಪದವಿಧರರಾಗಿದ್ದು. ಮೀರತ್ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು 1992 ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕೆಲಸ ಮಾಡಿ ನಂತರ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ವೃತ್ತಿ ತೊರೆದು ಬಿಕೆಯು ಸಂಘಟನೆಯಲ್ಲಿ ತೊಡಗಿಕೊಂಡು 2018ರಿಂದ ವಕ್ತಾರರಾಗಿ ರೈತರ ಪರ ಕೆಲಸ ಮಾಡುತ್ತಿದ್ದರು.

ಈ ಹಿಂದೆ ಹರಿದ್ವಾರ, ಉತ್ತರಖಾಂಡ್, ದೆಹಲಿ ಕಿಸಾನ್ ಕ್ರಾಂತಿಯಾತ್ರೆಯಾ ನಾಯಕರಾಗಿ ಗುರುತಿಸಿಕೊಂಡಿದ್ದ ಟಿಕಾಯತ್, 2007ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಖತಾವುಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಆರ್‍ ಜೆ ಡಿ  ಪಕ್ಷದಿಂದ ಅಮ್ರೋಹ ಕ್ಷೇತ್ರದಿಂದ ಆಕಾಡಕ್ಕೆ ಇಳಿದಿದ್ದರು.

ಟಿಕಾಯತ್ ಇಷ್ಟೆಲ್ಲ ಸಾಧನೆಯೊಂದಿಗೆ ಜೆಂಕೆಯೊಂದನ್ನು ಸೆರೆ ಹಿಡಿದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತೀಯ ಕಾನೂನಿನ ಪ್ರಕಾರ ಜಿಂಕೆಯನ್ನು ಸೆರೆ ಹಿಡಿದರೆ 7 ವರ್ಷ ಜೈಲು ಶಿಕ್ಷೆ, 25 ಸಾವಿರ ದಂಡವನ್ನೂ ಕಟ್ಟಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *