ರೇಲ್ವೆ ಮೇಲ್ಸೇತುವೆ ಕಳಪೆ ಕಾಮಗಾರಿ- ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜೋಶಿ ಆದೇಶ

Public TV
1 Min Read

ಹುಬ್ಬಳ್ಳಿ: ಲಕ್ಷ್ಮೇಶ್ವರ-ಮುನವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಬಳಿ ನಿರ್ಮಿಸಿರುವ ರೇಲ್ವೇ ಮೇಲ್ಸೇತುವೆ, ಪೂರ್ಣಗೊಂಡು ಹಸ್ತಾಂತರವಾದ 6 ರಿಂದ 7 ತಿಂಗಳಲ್ಲಿ ಹಾನಿಯಾಗಿದ್ದು, ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕಾಮಗಾರಿ ಕೈಗೊಂಡ ಗುತ್ತಿಗೆದಾರರು, ನಿರ್ವಹಿಸಿದ ಅಂದಿನ ಕೆಆರ್‍ಡಿಸಿಎಲ್ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಶಿರೂರ ಬಳಿ ಹಾನಿಗೀಡಾಗಿರುವ ರೇಲ್ವೆ ಮೇಲ್ಸೇತುವೆ ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೇತುವೆ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಗೀಡಾಗಲು ಸಾಧ್ಯವಿಲ್ಲ. ಕಾಮಗಾರಿ ಕಳಪೆಯಾಗಿದೆ, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರೊಂದಿಗೂ ಚರ್ಚಿಸಲಾಗಿದೆ. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ವೆಚ್ಚ ಮಾಡಿದ ಹಣ ಮರು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ವಿವರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕಾಮಗಾರಿ ಶೀಘ್ರ ಪ್ರಾರಂಭಿಸಬೇಕು ಪೂರ್ಣ ಪ್ರಮಾಣದಲ್ಲಿ ವಾಹನ ಸಂಚಾರ ಪ್ರಾರಂಭವಾದರೆ ತೊಂದರೆಯಾಗುತ್ತದೆ. ಪರ್ಯಾಯ ರಸ್ತೆ ಕಲ್ಪಿಸಬೇಕು ಎಂದರು.

ರಾಜ್ಯ ಕೃಷಿ ಉತ್ಪನ್ನ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ.ಚೌಡಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ಕುಂದಗೋಳ ತಾಲೂಕಿನಲ್ಲಿ 1,400 ಡೋಸ್ ಲಸಿಕೆ ಲಭ್ಯ
ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ 500 ಹಾಗೂ ತಾಲೂಕಿನ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಒಟ್ಟು ತಾಲೂಕಿನಲ್ಲಿ 1,400 ಡೋಸ್ ಕೋವಿಡ್ ಲಸಿಕೆ ಲಭ್ಯ ಇದೆ. ಗ್ರಾಮೀಣ ಜನರು ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಲಸಿಕೆಗೆ ಜನ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಗ್ರಾಮೀಣ ಜನರು ಅನಗತ್ಯವಾಗಿ ಭಯಪಡಬಾರದು. ಅಪಪ್ರಚಾರಗಳಿಗೆ ಕಿವಿಗೊಡಬಾರದು, ಲಸಿಕೆಯಿಂದ ಜೀವರಕ್ಷಣೆಯಾಗಲಿದೆ. ಗ್ರಾಮೀಣ ಜನ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *