ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡಿದ್ರೆ ಕಠಿಣ ಕ್ರಮ: ಡಿಸಿ ಕೆ.ಬಿ.ಶಿವಕುಮಾರ್

Public TV
1 Min Read

ಶಿವಮೊಗ್ಗ: ರೆಮ್‍ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಎಸ್‍ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಅಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಸ್ತುತ ಸರ್ಕಾರಿ ಆಸ್ಪತ್ರೆಯಲ್ಲಿ 172 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 306 ರೆಮ್‍ಡಿಸಿವಿರ್ ಇಂಜೆಕ್ಷನ್ ಲಭ್ಯವಿದೆ. ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಇಂತಹ ಪ್ರಕರಣ ಪತ್ತೆ ಹಚ್ಚಲು ಸ್ಟಿಂಗ್ ಆಪರೇಷನ್ ಸಹ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಆಕ್ಸಿಜನ್ ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಮೆಗ್ಗಾನ್‍ನಲ್ಲಿ 20 ಕೆಎಲ್ ಸೇರಿದಂತೆ ಒಟ್ಟು 51ಕೆಎಲ್ ಆಕ್ಸಿಜನ್ ಸಂಗ್ರಹಣಾ ಸಾಮಥ್ರ್ಯವಿದೆ. ಭದ್ರಾವತಿಯ ವಿಐಎಸ್‍ಎಲ್‍ನಲ್ಲಿ ಗರಿಷ್ಟ ಸಾಮಥ್ರ್ಯದೊಂದಿಗೆ ಆಕ್ಸಿಜನ್ ಉತ್ಪಾದಿಸಲಾಗುತ್ತಿದ್ದು, ನೆರೆಯ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಸಹ ಇಲ್ಲಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 104 ವೆಂಟಿಲೇಟರ್ ಲಭ್ಯವಿದೆ. ತಾಲೂಕು ಆಸ್ಪತ್ರೆಗಳಲ್ಲಿರುವ ಕೆಲವು ವೆಂಟಿಲೇಟರ್ ಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಒಂದೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 10,760 ಕೋವಿಶೀಲ್ಡ್ ಮತ್ತು 320 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ. ಕಳೆದ ನಾಲ್ಕು ದಿನಗಳಿಂದ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾಗಿದೆ. ಶೇ.45 ಕ್ಕಿಂತ ಹೆಚ್ಚು ತಲುಪಿದ್ದ ಪಾಸಿಟಿವ್ ರೇಟ್ ಇದೀಗ ಶೇ.40ರ ಆಸು ಪಾಸಿಗೆ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಇದನ್ನು ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *