ರೆಡ್ ಪ್ಯಾಡ್, ನ್ಯೂ ಬ್ಯಾಟ್ – ಅಭ್ಯಾಸಕ್ಕೆ ಸಿದ್ಧವೆಂಬ ಸೂಚನೆ ಕೊಟ್ಟ ಆರ್‌ಸಿಬಿ ನಾಯಕ ಕಿಂಗ್ ಕೊಹ್ಲಿ

Public TV
2 Min Read

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ಐಪಿಎಲ್‍ಗಾಗಿ ಅಭ್ಯಾಸ ಮಾಡಲು ಸಿದ್ಧವಾಗುತ್ತಿರುವ ಸೂಚನೆಯನ್ನು ನೀಡಿದ್ದಾರೆ.

ಕೊರೊನಾದಿಂದ ಸುಮಾರು 60 ವರ್ಷದ ಬಳಿಕ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಯನ್ನು ನಿಲ್ಲಿಸಿ ಸ್ತಭ್ಧವಾಗಿತ್ತು. ಸದ್ಯ ಕೊರೊನಾ ಲಾಕ್‍ಡೌನ್ ವಿಶ್ವದ ಬಹುತೇಕ ಕಡೆ ಸಡಿಲಿಕೆ ಆಗಿದ್ದು, ಕ್ರಿಕೆಟ್ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಇದರ ಮಧ್ಯದಲ್ಲಿ ಐಪಿಎಲ್ ಕೂಡ ಆರಂಭವಾಗುತ್ತಿದ್ದು, ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಅಭ್ಯಾಸ ಸಿದ್ಧವಾಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ವಿಚಾರ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೋರಿ ಹಾಕಿರುವ ಕೊಹ್ಲಿ, ಕೆಂಪು ಬಣ್ಣದ ಆರ್‌ಸಿಬಿ ತಂಡದ ಪ್ಯಾಡ್‍ಗಳು, ಹೊಸ ಬ್ಯಾಟ್‍ಗಳ ಮತ್ತು ತಮ್ಮ ಕ್ರಿಕೆಟ್ ಕಿಟ್‍ನ ಫೋಟೋ ಹಾಕಿದ್ದಾರೆ. ಈ ಮೂಲಕ ತಾನು ಐಪಿಎಲ್ ಪಂದ್ಯಗಳಿಗಾಗಿ ಅಭ್ಯಾಸ ನಡೆಸುವ ಸೂಚನೆಯನ್ನು ನೀಡಿದ್ದಾರೆ. ಕೊರೊನಾ ಲಾಕ್‍ಡೌನ್ ಆದ ನಂತರ ಕೊಹ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಉಳಿದಿದ್ದ ಕೊಹ್ಲಿ ಕೊರೊನಾ ವೈರಸ್ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಸೇರಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದನ್ನು ಓದಿ: ಅನುಷ್ಕಾಳನ್ನು ಭೇಟಿಯಾಗದಿದ್ದರೆ ನಾನು ಬದಲಾಗುತ್ತಿರಲಿಲ್ಲ: ಪತ್ನಿಯನ್ನು ಹಾಡಿಹೊಗಳಿದ ವಿರಾಟ್

ಐಪಿಎಲ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಆಗಿ ಉತ್ತಮ ಸಾಧನೆ ಮಾಡಿರುವ ಕೊಹ್ಲಿ, ಐಪಿಎಲ್‍ನಲ್ಲಿ 37.84ರ ಸರಾಸರಿಯೊಂದಿಗೆ ಒಟ್ಟು 5,412 ರನ್ ಗಳಿಸಿದ್ದಾರೆ ಮತ್ತು 131.61 ಸ್ಟ್ರೈಕ್ ರೇಟ್ ಬ್ಯಾಟ್ ಬೀಸಿದ್ದಾರೆ. ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಕೊಹ್ಲಿ ಐದು ಶತಕ ಮತ್ತು ಮೂವತ್ತಾರು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಇದುವರೆಗೆ ನಾಯಕನಾಗಿ ಅವರು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಇದನ್ನು ಓದಿ: ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

ಕೊರೊನಾ ಲಾಕ್‍ಡೌನ್ ಇಲ್ಲದಿದ್ದರೆ ಐಪಿಎಲ್-2020 ಕಳೆದ ಮಾರ್ಚ್ ತಿಂಗಳಲ್ಲಿ ಇಂಡಿಯಾದಲ್ಲೇ ಆರಂಭವಾಗಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಮುಂದಕ್ಕೆ ಹೋಗಿತ್ತು. ಈಗ ಕೊರೊನಾ ವೈರಸ್ ಕಾಟದಿಂದ ಈ ಬಾರಿಯ ಐಪಿಎಲ್ ಅನ್ನು ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಮುಂದಿನ ತಿಂಗಳ 19ರಂದು ಆರಂಭವಾಗಲಿರುವ ಐಪಿಎಲ್ ಫೈನಲ್ ನವೆಂವರ್ 8 ಅಥವಾ 10ರಂದು ನಡೆಯಲಿದೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *