ರೆಡ್‍ಝೋನ್ ಬಿಟ್ಟು ಬೇರೆ ಪ್ರದೇಶದಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭ: ಸವದಿ

Public TV
2 Min Read

– ಸಿಎಂ ಜೊತೆ ಸಭೆ ಮಾಡಿ ನಂತರ ನಿಯಮ ಬಿಡುಗಡೆ

ಬೆಂಗಳೂರು: ರೆಡ್ ಝೋನ್ ಮತ್ತು ಕಂಟೈನ್ಮೆಂಟ್ ಪ್ರದೇಶಗಳನ್ನು ಬಿಟ್ಟು ಬೇರೆ ಎಲ್ಲ ಕಡೆ ಬಸ್ ಸಂಚಾರ ಆರಂಭ ಮಾಡುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇಂದು ಬಸ್ ಸಂಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದೆ. ಸಭೆಯಲ್ಲಿ ಬಸ್ ಸಂಚಾರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಹುತೇಕ ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ಬಸ್ ಸಂಚಾರದ ವಿಚಾರದಲ್ಲಿ ರಾಜ್ಯಗಳು ತೀರ್ಮಾನ ತೆಗೆದುಕೊಳ್ಳಬುಹುದು ಎಂಬ ಸುತ್ತೋಲೆ ಬಂದಿದೆ. ಹಾಗಾಗಿ ಇಂದಿನ ಸಭೆಯಲ್ಲಿ ಬಸ್ ಸಂಚಾರಕ್ಕೆ ನಿಯಮಗಳನ್ನು ರೂಪಿಸುತ್ತೇವೆ. ಅಂತರ್ ಜಿಲ್ಲಾ, ಅಂತರ್ ರಾಜ್ಯ ಬಸ್ ಸಂಚಾರ ಸಂಬಂಧ ನಿಯಮ ತರುತ್ತೇವೆ. ಬೆಂಗಳೂರಿನಲ್ಲಿ ಬಸ್ ಸಂಚಾರ ಸವಾಲಿನ ಕೆಲಸ ಬೆಂಗಳೂರು ರೆಡ್ ಝೋನ್ ಆಗಿರುವುದರಿಂದ ಹೆಚ್ಚಿನ ಮುತುವರ್ಜಿಯಿಂದ ಬಸ್ ಸಂಚಾರಕ್ಕೆ ಅವಕಾಶ ಕೊಡುತ್ತೇವೆ ಎಂದು ಸವದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಎಷ್ಟು ಬಸ್ ಗಳನ್ನು ರಸ್ತೆಗೆ ಇಳಿಸಬೇಕು ಎಂಬುದನ್ನು ಇಂದು ನಿರ್ಧರಿಸುತ್ತೇವೆ. ಬಸ್ಸಿನಲ್ಲಿ ಎಷ್ಟು ಪ್ರಯಾಣಿಕರು ಇರಬೇಕೆಂದು ಎಂಬುದರ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗದುಕೊಳ್ಳುತ್ತೇವೆ. ಸೀಟಿಂಗ್ ಕೆಪಾಸಿಟಿ ಆಧರಿಸಿ ಬಸ್ ಸಂಚಾರಕ್ಕೆ ಅವಕಾಶ ಕೇಳಿದ್ದೇವೆ. ಸದ್ಯ ಬಸ್ ಗಳ ಸಂಚಾರದಿಂದ ನಷ್ಟ ಆಗುತ್ತೆ ಎಂದು ಗೊತ್ತಿದೆ. ಆದರೆ ಸಾಮಾಜಿಕ ಸೇವೆ ಮನಗಂಡು ಬಸ್ ಸೇವೆಗೆ ಮುಂದಾಗಿದ್ದೇವೆ ಎಂದು ಸವದಿ ಮಾಹಿತಿ ನೀಡಿದರು.

ಬೇರೆ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಆ ರಾಜ್ಯದ ಅನುಮತಿ ಕೂಡಬೇಕು. ಆದರೆ ಎಲ್ಲ ಪ್ರದೇಶಗಳಿಗೂ ಬಸ್ ಸಂಚಾರ ಮಾಡುವುದು ಕಷ್ಟ. ಯಾಕೆಂದರೆ ಪುಣೆ ಮತ್ತು ಮುಂಬೈನಲ್ಲಿ ಕೊರೊನಾ ಅರ್ಭಟ ಜಾಸ್ತಿ ಇದೆ. ಅಲ್ಲಿಗೆ ನಾವು ರಾಜ್ಯದಿಂದ ಬಸ್ ಬಿಡಲು ಆಗುವುದಿಲ್ಲ. ಎಲ್ಲ ರಾಜ್ಯದಲ್ಲೂ ಕೊರೊನಾ ಸೋಂಕು ಇದೆ ಆದರೆ ಬೇರೆ ರಾಜ್ಯದಲ್ಲಿ ಸೋಂಕು ಇಲ್ಲದಿರುವ ಪ್ರದೇಶಗಳಿಗೆ ಬಸ್ ಬಿಡಲಾಗುವುದು ಎಂದು ಹೇಳಿದರು.

ಇದೇ ವೇಳೆ ಖಾಸಗಿ ಬಸ್ ಸಂಚಾರದ ಬಗ್ಗೆ ಮಾತನಾಡಿದ ಸವದಿ, ಖಾಸಗಿ ಬಸ್ಸುಗಳ ಸಂಚಾರ ಸದ್ಯಕ್ಕಿಲ್ಲ. ಖಾಸಗಿ ಬಸ್ಸುಗಳ ಸಮಸ್ಯೆ ನಮಗಿಂತ ಹೆಚ್ಚಾಗಿದೆ. ಖಾಸಗಿ ಬಸ್ ಸಂಚಾರ ಆರಂಭಿಸುವ ಬಗ್ಗೆಯೂ ಇಂದು ನಿರ್ಧಾರ ಮಾಡುತ್ತೇವೆ. ಮುಖ್ಯವಾಗಿ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಸಿಬ್ಬಂದಿ ಪರೀಕ್ಷೆ ಈ ಎಲ್ಲದರ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *