ರಿಷಬ್ ಪಂತ್‍ಗೆ ಒಲಿದ ಡೆಲ್ಲಿ ಕ್ಯಾಪ್ಟನ್ ಪಟ್ಟ

Public TV
2 Min Read

ನವದೆಹಲಿ: 14ನೇ ಆವೃತ್ತಿಯ ಐಪಿಎಲ್‍ಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ತಂಡಗಳು ಈಗಾಗಲೇ ಅಭ್ಯಾಸ ಆರಂಭಿಸಿದೆ. ಈ ನಡುವೆ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುವ ಭಾಗ್ಯ ಭಾರತ ತಂಡದ ಯುವ ವಿಕೆಟ್‍ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಅವರಿಗೆ ಒಲಿದು ಬಂದಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಭಾರತ ತಂಡದ ಆಟಗಾರ ಶ್ರೇಯಸ್ ಅಯ್ಯರ್ ಅವರು ಎಡಭುಜದ ನೋವಿಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು ಇದಾದ ಬಳಿಕ ಪರೀಕ್ಷಿಸಿದ ವೈದ್ಯರು ಅಯ್ಯರ್ ಅವರಿಗೆ 2 ತಿಂಗಳ ವಿಶ್ರಾಂತಿ ಬೇಕು ಎಂದಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್‍ನಿಂದ ಅಯ್ಯರ್ ಹೊರಗುಳಿದಿದ್ದಾರೆ. ಹಾಗಾಗಿ ಡೆಲ್ಲಿ ಫ್ರಾಂಚೈಸ್ 2021ರ ಐಪಿಎಲ್‍ನಲ್ಲಿ ಡೆಲ್ಲಿತಂಡವನ್ನು ರಿಷಬ್ ಪಂತ್ ಮುನ್ನಡೆಸಲಿದ್ದಾರೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ.

ಡೆಲ್ಲಿ ತಂಡದ ನಾಯಕನಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂತ್ ನಾನು ಡೆಲ್ಲಿಯಲ್ಲೇ ಹುಟ್ಟಿಬೆಳೆದವನು. 6 ವರ್ಷಗಳ ಹಿಂದೆ ಐಪಿಎಲ್ ಪಯಣವನ್ನು ಆರಂಭಿಸಿದೆ. ಆದರೆ ಆವತ್ತಿನಿಂದ ನನಗೆ ಡೆಲ್ಲಿ ತಂಡವನ್ನು ಮುನ್ನಡೆಸಬೇಕೆಂಬ ಕನಸಿತ್ತು. ಆ ಕನಸು ಇದೀಗ ನನಸಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

23 ವರ್ಷದ ಪಂತ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಬ್ಯಾಟಿಂಗ್ ನಿರ್ವಹಿಸಿ ಭಾರತ ತಂಡಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು ತಂದುಕೊಟ್ಟಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಮತ್ತು ಏಕದಿನ ಸರಣಿಯಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

ಡೆಲ್ಲಿ ತಂಡದಲ್ಲಿ ಘಟಾನುಘಟಿ ಆಟಗಾರರ ದಂಡೇ ಇದ್ದು ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ ಮತ್ತು ಆರ್. ಅಶ್ವಿನ್ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಪಂತ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಹೊರಿಸಲಾಗಿದೆ.

ಪಂತ್ ಈ ಮೊದಲು ರಣಜಿ ಪಂದ್ಯಗಳಲ್ಲಿ ಮತ್ತು ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವವಿದೆ. ಪಂತ್ ಹಾಗೂ ಇತರ ಪ್ರಮುಖ ಆಟಗಾರರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದು ತರಬೇತಿ ಆರಂಭಿಸಿದ್ದಾರೆ.

ಕಳೆದ ವರ್ಷ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡ ಅಮೋಘ ನಿರ್ವಹಣೆ ತೋರಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‍ನಲ್ಲಿ ಮುಂಬೈ ವಿರುದ್ಧ ಮುಗ್ಗರಿಸಿತ್ತು. ಆದರೆ ಈ ಬಾರಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಕಣಕ್ಕಿಳಿಯಲಿದ್ದು, ತಂಡ ಯಾವ ರೀತಿಯ ನಿರ್ವಹಣೆ ತೋರಲಿದೆ? ಪಂತ್ ಯಾವರೀತಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಡೆಲ್ಲಿ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 10 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. 14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಹಾಗೂ ಮುಂಬೈ ನಗರಗಳಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *