ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ

Public TV
2 Min Read

ಮುಂಬೈ: ಐಪಿಎಲ್‍ನಲ್ಲಿ ಬೌಂಡರಿ, ಸಿಕ್ಸರ್‍ ಗಳ ಹಬ್ಬ ಒಂದು ಕಡೆ ಅಭಿಮಾನಿಗಳಿಗೆ ಕಿಕ್ ಕೊಟ್ಟರೆ ಇನ್ನೊಂದೆಡೆ ಕ್ರಿಕೆಟಿಗರು ಕ್ಯಾಚ್ ಹಿಡಿದಾಗ ಮಾಡುವ ಸಂಭ್ರಮಾಚರಣೆ ಇನ್ನಷ್ಟು ಮನರಂಜನೆ ನೀಡುತ್ತದೆ. ಇದೀಗ ಐಪಿಎಲ್‍ನಲ್ಲಿ ಆಡುತ್ತಿರುವ ರಾಜಸ್ಥಾನ ತಂಡದ ಯುವ ಆಟಗಾರ ಆಲ್‍ರೌಂಡರ್ ರಿಯಾನ್ ಪರಾಗ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿದು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ನೋಡುಗರಿಗೆ ಐಪಿಎಲ್‍ನ ಕಿಕ್ ಹೆಚ್ಚಿಸಿದ್ದಾರೆ.

14ನೇ ಆವೃತ್ತಿಯ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪರಸ್ಪರ ಎದುರುಬದುರಾಗಿದ್ದವು. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ರಿಯಾನ್ ಪರಾಗ್ ಸಹ ಆಟಗಾರ ರಾಹುಲ್ ತೆವಾಟಿಯರೊಂದಿಗೆ ವಿಶಿಷ್ಟ ಸಂಭ್ರಮಾಚರಣೆ ಮಾಡುವ ಮೂಲಕ ಎಲ್ಲರ ಮುಖದಲ್ಲೂ ಮಂದಹಾಸ ತರಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ ತಂಡ ವಿಕೆಟ್ ಕಳೆದುಕೊಂಡು ಸಾಗಿತ್ತು. ಆದರೂ ಕೂಡ ಬಿಗ್ ಹಿಟ್ಟರ್ ಪ್ಯಾಟ್ ಕಮಿನ್ಸ್ ಕಡೆಯಲ್ಲಿ ಸಿಡಿಯಬಹುದೆಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕಡೆಯ ಓವರ್ ಎಸೆಯಲು ಬಂದ ಕ್ರಿಸ್ ಮೋರಿಸ್ ಅವರ ಎರಡನೇ ಎಸೆತದಲ್ಲಿ ಕೊಲ್ಕತ್ತಾ ತಂಡದ ಬ್ಯಾಟ್ಸ್ ಮ್ಯಾನ್ ಪ್ಯಾಟ್ ಕಮಿನ್ಸ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಅದರೆ ಬೌಂಡರಿ ಲೈನ್ ಬಳಿ ರಿಯಾನ್ ಪರಾಗ್ ಹಿಡಿದ ಅದ್ಭುತ ಕ್ಯಾಚ್‍ಗೆ ಕಮಿನ್ಸ್ ಔಟ್ ಅದರು. ಈ ಕ್ಯಾಚ್ ಹಿಡಿದ ಬಳಿಕ ಮೈದಾನದಲ್ಲಿ ಪರಾಗ್ ಸಹಆಟಗಾರ ತೆವಾಟಿಯರೊಂದಿಗೆ ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತೆ ಬೌಂಡರಿ ಲೈನ್ ಬರಿ ಪೋಸ್ ನೀಡಿದರು. ಇದೀಗ ಈ ವೀಡಿಯೋ ವೈರಲ್ ಅಗತೊಡಗಿದೆ. ಅಭಿಮಾನಿಗಳು ಕೂಡ ಈ ಸಂಭ್ರಮಾಚರಣೆ ಕಂಡು ಫಿದಾ ಆಗಿದ್ದಾರೆ.

ಪರಾಗ್ ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆ ಬಳಿಕ ಅಸ್ಸಾಂ ಮೂಲದ ಬಿಹು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದರು.

ಐಪಿಎಲ್‍ನಲ್ಲಿ ಕ್ರಿಕೆಟ್ ರಸದೌತಣದೊಂದಿಗೆ ಕ್ರಿಕೆಟಿಗರ ಸಂಭ್ರಮಾಚರಣೆ ಕೂಡ ಇದೀಗ ಬಾರಿ ಸುದ್ದಿ ಮಾಡುತ್ತಿದೆ. ಕಳೆದ ಸೀಸನ್‍ಗಳಲ್ಲಿ ಹಲವು ಆಟಗಾರರು ವಿವಿಧ ಬಗೆಯ ಸಂಭ್ರಮಾಚರಣೆ ಮಾಡುವ ಮೂಲಕ ಐಪಿಎಲ್‍ನ ಕಳೆ ಹೆಚ್ಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *