ರಾಸಾಯನಿಕವಿಲ್ಲದೆ ನೈಸರ್ಗಿಕ ಕೃಷಿ ಮಾಡಿ ತೋರಿಸಿದ ಉಪೇಂದ್ರ

Public TV
2 Min Read

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ರಜಾಕೀಯ, ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದು, ಎರಡನ್ನೂ ನಿಭಾಯಿಸುತ್ತಿದ್ದಾರೆ. ರಾಜಕೀಯಕ್ಕೆ ಹೊಸ ಭಾಷ್ಯ ಬರೆಯಲು ಯತ್ನಿಸುತ್ತಿರುವ ಉಪೇಂದ್ರ ತಮ್ಮ ಐಡಿಯಾಗಳ ಮೂಲಕ ಜನರ ಮುಂದೆ ಹೋಗುತ್ತಿದ್ದಾರೆ. ಆದರೆ ಇದೀಗ ಸಿನಿಮಾ, ಪ್ರಜಾಕೀಯ ಹೊರತುಪಡಿಸಿ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಬಿಸಿದ್ದಾರೆ. ತಾವೇ ಕೆಲಸ ಮಾಡಿ ಫಸಲನ್ನೂ ತೆಗೆದಿದ್ದಾರೆ.

ಸಿನಿಮಾ ರಂಗದಲ್ಲಿ ವಿಭಿನ್ನ ಕ್ರಿಯೇಟಿವಿಟಿ ಮೂಲಕ ಫ್ಯಾನ್ ಫಾಲೋವರ್ಸ್ ಹೊಂದಿರುವ ಉಪೇಂದ್ರ, ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಎಚ್2ಒ, ಶ್!, ಓಂ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ನಂತರ ಇದೀಗ ಪ್ರಜಾಕೀಯದ ಮೂಲಕ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಹೊರಟಿದ್ದಾರೆ. ಹೀಗೆ ತಮ್ಮದೇ ಪ್ರಯತ್ನದಲ್ಲಿ ತೊಡಗಿರುವ ಉಪ್ಪಿ, ಲಾಕ್‍ಡೌನ್ ಹಿನ್ನೆಲೆ ಮತ್ತೊಂದು ಕೆಲಸ ಮಾಡಿ ಭೇಷ್ ಎನ್ನಿಸಿಕೊಂಡಿದ್ದಾರೆ.

ಹಲವು ನಟ, ನಟಿಯರು ಲಾಕ್‍ಡೌನ್ ಅವಧಿಯಲ್ಲಿ ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ನಟ ಉಪೇಂದ್ರ ಕೃಷಿ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೇವಲ ಎರಡೂವರೆ ತಿಂಗಳಲ್ಲಿ ಬೆಳೆಯನ್ನೂ ತೆಗೆದಿದ್ದಾರೆ. ಹೌದು ತಮ್ಮ ಹೊಲದಲ್ಲಿ ಸಾವಯವ ಪದ್ಧತಿ ಮೂಲಕ ತರಕಾರಿ, ಹೂವು ಬೆಳೆದಿದ್ದು, ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಪೋಸ್ಟ್ ಮಾಡಿ ಸಾಲುಗಳನ್ನು ಬರೆದಿದ್ದು, ಅತೀ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ತಿಳಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಹೇಳಿದ್ದನ್ನು ಪ್ರ್ಯಾಕ್ಟಿಕಲಿ ತೋರಿಸುತ್ತಾರೆ ಉಪ್ಪಿ ಬಾಸ್ ಎಂದಿದ್ದಾರೆ. ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲ ಎಲ್ಲದರಲ್ಲೂ ಕ್ರಿಯೇಟಿವಿಟಿ ಹೊಂದಿದ್ದಾರೆ ಎಂದೆಲ್ಲ ಹೇಳಿದ್ದಾರೆ.

ವಿಡಿಯೋದಲ್ಲಿ ಉಪ್ಪಿ ತಾವು ಮಾಡಿದ ಕೆಲಸದ ಬಗ್ಗೆ ಹೇಳಿದ್ದು, ಎರಡೂವರೆ ತಿಂಗಳ ಹಿಂದೆ ನಾವು ಇಲ್ಲಿ ಸಸಿಗಳನ್ನು ನೆಡುತ್ತಿದ್ದೆವು. ಈಗ ಅದರ ಫಲ ಬಂದಿದೆ. ಚೆಂಡು ಹೂವು, ಸೌತೆಕಾಯಿ, ಎರಡು ಬಗೆಯ ಬದನೆಕಾಯಿ ಎಷ್ಟು ಅದ್ಭುತವಾಗಿವೆ ನೋಡಿ. ನಾವು ಯಾವುದೇ ಕ್ರಿಮಿನಾಶಕ, ರಸಗೊಬ್ಬರವನ್ನು ಬಳಕೆ ಮಾಡಿಲ್ಲ. ಕೇವಲ ದನದ ಗೊಬ್ಬರ, ನೀರು ಬಿಟ್ಟು ಬೆಳೆದಿದ್ದೇವೆ. ಹುಳು ಬೀಳಲ್ಲ ಅಂತಲ್ಲ ಶೇ.5ರಷ್ಟು ಬೆಳೆಗೆ ಹುಳು ಬೀಳುತ್ತದೆ. ಆದರೆ ನಮ್ಮ ಜೊತೆ ಅವೂ ಬದುಕಬೇಕಲ್ಲವೇ, ನಮ್ಮೊಂದಿಗೆ ಹುಳು ಚಿಟ್ಟೆಗಳು ಸಹ ಇರಬೇಕು. ಕ್ರಿಮಿನಾಶಕ ಹೊಡೆದು ಭೂಮಿ ಹಾಳು ಮಾಡುವುದರ ಜೊತೆಗೆ, ಕೇವಲ ಶೇ.10ರಷ್ಟು ಇಳುವರಿ ಹೆಚ್ಚು ಬರುತ್ತದೆಂದು ತಪ್ಪು ಕೆಲಸ ಮಾಡುತ್ತೇವೆ. ಇದಾವುದನ್ನೂ ಬಳಸದೆ ಬೆಳೆದು ತೋರಿಸಬೇಕೆಂದೇ ಕೃಷಿ ಮಾಡಿದೆ. ಈ ಪದ್ಧತಿಯಿಂದ ಬೆಳೆದ ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.

ಉಪೇಂದ್ರ ಸದ್ಯ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದೆ. ಹೀಗಾಗಿ ಕೃಷಿಯತ್ತ ಮುಖ ಮಾಡಿದ್ದಾರೆ. ಕಬ್ಜ ಸಿನಿಮಾದ ಪೋಸ್ಟರ್‍ಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಉಪ್ಪಿ ಹಳೆ ಕಾಲದ ಗನ್ ಹಿಡಿದು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಅಭಿಮಾನಿಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ.

Share This Article
Leave a Comment

Leave a Reply

Your email address will not be published. Required fields are marked *