ರಾಯಣ್ಣ ಪ್ರತಿಮೆ ವಿವಾದ- ಸಿದ್ದು ಟ್ವೀಟ್‍ ವಿರುದ್ಧ ಸಿ.ಟಿ ರವಿ ಆಕ್ರೋಶ

Public TV
2 Min Read

ಚಿಕ್ಕಮಗಳೂರು: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದದ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್‍ಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕುವೆಂಪು ಕಲಾ ಮಂದಿರದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಸಿ.ಟಿ ರವಿ, ಸಿದ್ದರಾಮಯ್ಯ ಸಿಎಂ ಆಗಿದ್ದೋರು. ಮುಖ್ಯಮಂತ್ರಿಯೇ ಕಾಗಿನೆಲೆ ಸ್ವಾಮೀಜಿ ಭೇಟಿ ಮಾಡಿದಾಗ ಅಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡ್ತೀವಿ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಅವರೇ ಆಡಳಿತದ ಮುಖ್ಯಸ್ಥ. ಅವರು ಹೇಳಿದ ಮೇಲೆ ಗೊಂದಲ ನಿರ್ಮಾಣ ಮಾಡೋದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಒಂದು ಸಂಚು ಎಂದು ಕಿಡಿಕಾರಿದ್ದಾರೆ.

ಸಿಎಂ ಆಗಿದ್ದೋರು ಯೋಚಿಸಬೇಕು. ನಾಳೆ ಮತ್ತೊಬ್ಬರು ಸಿಎಂ ಆಗಬಹುದು. ಅವರ ಆದೇಶವೇ ಅಂತಿಮ ತಾನೆ. ಸಿಎಂ ಮೂರು ದಿನದ ಹಿಂದೆ ಹೇಳಿದ್ದಾರೆ. ಈಗಲೂ ಜಗಳ ಮಾಡ್ತಾರಂದ್ರೆ ಅದರ ಉದ್ದೇಶ ಒಳ್ಳೆದಿದೆ ಅನ್ನಿಸಲ್ಲ. ಏನಾದರೂ ಮಾಡಿ ರಾಜ್ಯದ ಜನರ ನೆಮ್ಮದಿ ಹಾಳು ಮಾಡಬೇಕೆಂದು ಕೆಲವರು ಸಂಚು ರೂಪಿಸಿದ್ದಾರೆ. ಆ ಸಂಚಿಗೆ ಸಿದ್ದರಾಮಯ್ಯ ಬಲಿಯಾಗಬಾರದು ಎಂದರು.

ರಾಯಣ್ಣನ ಪ್ರತಿಮೆ ವಿಚಾರ ವಿವಾದದ ಸ್ವರೂಪ ಪಡೆಯಬಾರದು. ಪ್ರತಿಮೆ ನಿರ್ಮಾಣವಾಗಲೇ ಬೇಕು. ಚೆನ್ನಾಗಿ ಆಗಬೇಕು. ಬಸವೇಶ್ವರರ ಪ್ರತಿಮೆಯನ್ನ ಸರ್ಕಲ್‍ನಲ್ಲಿ ಮಾಡಿದ್ದೇವೆ. ಸಂಗೊಳ್ಳಿ ರಾಯಣ್ಣನ ಹೆಸರನ್ನ ರೈಲ್ವೆ ನಿಲ್ದಾಣಕ್ಕೆ ಇಟ್ಟಿದ್ದೇವೆ. ಸಂಗೊಳ್ಳಿ ರಾಯಣ್ಣನ ಹೆಸರಿಡೋದು ನಮಗೆ ಹೆಮ್ಮೆಯ ವಿಷಯ. ಆ ಕೆಲಸ ಆಗಲೇಬೇಕು. ಅದಕ್ಕೆ ಯಾವುದೇ ಅಡೆತಡೆ ಇದ್ದರು ಕೂಡ ಸರಿಪಡಿಸಿ ಅದಕ್ಕೆ ಅವಕಾಶ ಮಾಡಿಕೊಡ್ತೀವಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗೇ ಹೇಳಿದ ಮೇಲೂ ಕೂಡ ಸಂಘರ್ಷದ ಸ್ವರೂಪ ಪಡೆದಿರುವುದು ದುರಾದೃಷ್ಟಕರ ಎಂದು ತಿಳಿಸಿದರು.

ಸಂಘರ್ಷದ ಹಿಂದೆ ರಾಜಕೀಯ ದುರದ್ದೇಶವೂ ಇರಬಹುದು. ಯಾಕಂದ್ರೆ ಡಿ.ಜೆ ಹಳ್ಳಿ, ಕೆ.ಜೆಹಳ್ಳಿ ಪ್ರಕರಣದಲ್ಲಿ ಏನಾಗಿದೆ ಎಂದು ನಿಮಗೆ ಗೊತ್ತಿದ್ಯಲ್ಲಾ. 300-400 ವಾಹನಗಳಿಗೆ ಬೆಂಕಿ ಹಾಕಿ, ಪೊಲೀಸ್ ಸ್ಟೇಷನ್ ಸುಟ್ಟು, ಎಂಎಲ್‍ಎ ಮನೆ ಸುಟ್ಟು ರಾಜಕೀಯ ದುರ್ಬಳಕೆಗೋಸ್ಕರ ಆ ಕೆಲಸ ಮಾಡಿದ್ರು. ಆ ಜನ ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಂಚು ಮಾಡುತ್ತಿರುವ ಸಾಧ್ಯತೆ ಇದೆ. ಈ ಹಂತದಲ್ಲೂ ತನಿಖೆ ನಡೆಸುವ ಅವಶ್ಯಕತೆ ಇದೆ. ಈ ಹಿನ್ನೆಯಲ್ಲೂ ತನಿಖೆ ನಡೆಸುವಂತೆ ಮನವಿ ಮಾಡ್ತೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *