ರಾಮ ಮಂದಿರಕ್ಕೆ ನಿಧಿ – 27 ದಿನಗಳಲ್ಲಿ 1,511 ಕೋಟಿ ಸಂಗ್ರಹ

Public TV
1 Min Read

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಒಟ್ಟು 27 ದಿನಗಳಲ್ಲಿ 1,511 ಕೋಟಿ ರೂ. ನಿಧಿ ಸಂಗ್ರಹವಾಗಿದೆ.

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ ಅವರು ಮಾಹಿತಿ ನೀಡಿದ್ದು, ‘ಜನವರಿ 15ರಂದು ಆರಂಭವಾಗಿರುವ ನಿಧಿ ಸಮರ್ಪಣಾ ಅಭಿಯಾನವು ಫೆ.27ರವರೆಗೆ ನಡೆಯಲಿದೆ. ಫೆ.11ರ ಸಂಜೆವರೆಗಿನ ದಾಖಲೆಗಳ ಪ್ರಕಾರ ಒಟ್ಟು 1,511 ಕೋಟಿ ರೂ. ಸಂಗ್ರಹವಾಗಿದೆ. ಎಲ್ಲಾ ಧರ್ಮ, ಸಮುದಾಯಗಳ ಜನರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ ಎಂದು ಹೇಳಿದರು.

 

ಪುಟ್ಟ ಮಕ್ಕಳು ಸಹ ತಮ್ಮ ಪಿಗ್ಗಿ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ್ದ ಹಣವನ್ನು ಮಂದಿರಕ್ಕಾಗಿ ನೀಡುತ್ತಿದ್ದಾರೆ. ಫೆ.27ರ ಒಳಗಡೆ ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬವನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಮಾತನಾಡಿ, ರಾಮ ಮಂದಿರ ನಿರ್ಮಾಣದ ಪಾಯ ಅಗೆಯುವ ಕಾರ್ಯ ಆರಂಭವಾಗಿದ್ದು, ಈವರೆಗೆ ಐದು ಮೀಟರ್‌ ಆಳದವರೆಗೆ ಅಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಆಗಸ್ಟ್‌ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದು, ಒಟ್ಟು 70 ಎಕರೆ ವಿಸ್ತೀರ್ಣದಲ್ಲಿ ರಾಮಮಂದಿರ ಸಂಕೀರ್ಣ ನಿರ್ಮಾಣವಾಗಲಿದೆ.

ಕಾಮಗಾರಿಯನ್ನು ಮೂರು ವರ್ಷದಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹಾಕಲಾಗಿದ್ದು, ಒಟ್ಟು 1,100 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ 400 ಕೋಟಿ ರೂ. ವೆಚ್ಚವಾಗಬಹುದು ಎಂದು ಟ್ರಸ್ಟ್‌ ಅಂದಾಜಿಸಿದೆ.

Share This Article
Leave a Comment

Leave a Reply

Your email address will not be published. Required fields are marked *