ರಾಮಮಂದಿರ ಶಿಲಾನ್ಯಾಸಕ್ಕೆ ಅಂಜನಾದ್ರಿ ಪರ್ವತದ ಶಿಲೆ- ಗೋಕರ್ಣದಲ್ಲಿ ವಿಶೇಷ ಪೂಜೆ

Public TV
1 Min Read

ಕಾರವಾರ: ಕಾರವಾರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸಕ್ಕಾಗಿ ಕಳುಹಿಸಿ ಕೊಡಲು ಅಂಜನಾದ್ರಿ ಪರ್ವತದಿಂದ ತಂದ ಶಿಲೆಗೆ ಇಂದು ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯ್ತು.

ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಈ ಶಿಲೆಯನ್ನು ಗೋಕರ್ಣ ಕ್ಷೇತ್ರಕ್ಕೆ ತರಲಾಗಿದ್ದು, ದೇವಾಲಯದ ಹೊರ ಭಾಗದಲ್ಲೇ ಶಿಲೆಯನ್ನು ಪೂಜಿಸಿ ಪ್ರಾರ್ಥಿಸಲಾಯಿತು. ಬಳಿಕ ಶಿಲೆಯನ್ನು ತಲೆಯಲ್ಲಿ ಹೊತ್ತುಕೊಂಡು ಕಾರ್ಯಕರ್ತರು ದೇವಸ್ಥಾನಕ್ಕೆ ಸುತ್ತುವರಿದರು.

ಈ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯಾಧ್ಯಾಕ್ಷ ಪ್ರಮೋದ್ ಮುತಾಲಿಕ್, 500 ವರ್ಷಗಳ ಸುದೀರ್ಘ ಹೋರಾಟಕ್ಕೆ ತೆರೆಬಿದ್ದಿದ್ದು, ಅದೆಷ್ಟೋ ತ್ಯಾಗ ಬಲಿದಾನಗಳು ನಡೆದಿವೆ. ಸ್ವಾತಂತ್ರ್ಯ ಬಂದ ನಂತರವೂ ಹೋರಾಟ ನಡೆದಿದೆ. ಅಂಜನಾದ್ರಿ ಆಂಜನೇಯನ ಜನ್ಮ ಭೂಮಿಯಾಗಿದ್ದು, ಇಲ್ಲಿಂದ ರಾಮಜನ್ಮ ಭೂಮಿಗೆ ಶಿಲೆ ತಲುಪಿಸುವ ಕಾರ್ಯ ಒದಗಿರುವುದು ಪುಣ್ಯ ಹಾಗೂ ಶ್ರೇಷ್ಠ ಅವಕಾಶ ಎಂದರು.

ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಜಯಂತ ನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಶಿಲೆಯೊಂದಿಗೆ ರಾಮಚಂದ್ರಾಪುರ ಮೂಲ ಮಠ ಅಶೋಕೆಗೂ ಭೇಟಿ ನೀಡಲಾಗಿದ್ದು, ಅಲ್ಲಿಂದ ಉಡುಪಿ ಪೇಜಾವರ ಮಠಕ್ಕೆ ತೆರಳಿ ಅಲ್ಲಿ ಶಿಲೆಯನ್ನು ಶ್ರೀಗಳ ಬಳಿ ನೀಡಿ ಅವರ ಮೂಲಕ ಅಯೋಧ್ಯೆಗೆ ಶಿಲೆಯು ತಲುಪಲಿದೆ. ಗೋಕರ್ಣ ಮಾತ್ರವಲ್ಲದೇ ಯಲ್ಲಾಪುರದ ಜೋಡಿಕೆರೆ ಆಂಜನೇಯ ಮತ್ತು ಭಟ್ಕಳದ ಚನ್ನಪಟ್ಟಣದ ಆಂಜನೇಯ ದೇವಸ್ಥಾನ ಪ್ರಮುಖ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *