ರಾಬರ್ಟ್ ರಾಣಿಯ ಹಾಡಿನ ಮೋಡಿಗೆ ನೆಟ್ಟಿಗರು ಫಿದಾ

Public TV
3 Min Read

ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಬಹುತೇಕರು ತಮ್ಮ ವಿವಿಧ ಹವ್ಯಾಸಗಳಲ್ಲಿ ತೊಡಗಿದ್ದು, ಹಲವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದರೆ, ಇನ್ನೂ ಹಲವರು ತಮಗಿಷ್ಟದ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅದೇ ರೀತಿ ರಾಬರ್ಟ್ ಬೆಡಗಿ ಆಶಾ ಭಟ್ ಸಹ ತಮಗಿಷ್ಟದ ಚಟುವಟಿಕೆಗಳಲ್ಲಿ ಬ್ಯಸಿಯಾಗಿದ್ದಾರೆ.

ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತವಾಗಿದ್ದು, ಹೀಗಾಗಿ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಆಶಾ ಭಟ್ ಡ್ಯಾನ್ಸಿಂಗ್, ಫಿಟ್ನೆಸ್ ಸೇರಿದಂತೆ ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿದ್ದು, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ.

ಡ್ಯಾನ್ಸಿಂಗ್, ಮಾಡಲಿಂಗ್ ನಂತರ ಇದೀಗ ಹಾಡು ಹಾಡುವ ಮೂಲಕ ಮೋಡಿ ಮಾಡಿದ್ದಾರೆ. ರಮೇಶ್ ಅರವಿಂದ್ ಹಾಗೂ ಸಹಾಸಿನಿ ಅಭಿನಯದ ಅಮೃತವರ್ಷಿಣಿ ಚಿತ್ರದ ‘ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು’ ಎಂಬ ಗೀತೆಯನ್ನು ಹಾಡಿ ಅಭಿಮಾನಿಗಳನ್ನು ತಣಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ‘ತುಂತುರು’ ಗೀತೆ ಆಶಾ ಭಟ್ ಅವರ ನೆಚ್ಚಿನ ಹಾಡಂತೆ. ಹಾಗಾಗಿ ಈ ಹಾಡನ್ನು ಹಾಡಿದ್ದಾರೆ. ಹಾಡು ಹಾಡುವುದು ನನಗೆ ತುಂಬಾ ಖುಷಿ ನೀಡುತ್ತೆ. ಕಂಫರ್ಟ್ ಫೀಲ್ ಕೊಡುತ್ತೆ. ಹೀಗಾಗಿ ನನ್ನ ಫೇವರಿಟ್ ಹಾಡನ್ನು ಹಾಡುವ ಪ್ರಯತ್ನ ಮಾಡಿದ್ದೇನೆ. ಈ ಹಾಡನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಲಿಸನ್ ಅಟ್ ಯುವರ್ ಓನ್ ರಿಸ್ಕ್ ಎಂದು ಎಚ್ಚರಿಸಿದ್ದಾರೆ.

ಈ ಹಾಡು ಕೇಳಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ರಾಬರ್ಟ್ ರಾಣಿ ನಿಮ್ಮ ಕನ್ನಡ ಹಾಡಿಗೆ ನಾವು ಫಿದಾ ಆಗಿದ್ದೇವೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಖಂಡಿತ ನಿಮಗೆ ಕನ್ನಡ ತಾಯಿ ದೊಡ್ಡ ಯಶಸ್ಸು ಕೊಡುತ್ತಾಳೆ ಈ ನಿಮ್ಮ ಕನ್ನಡ ಅಭಿಮಾನಕ್ಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡತಿಯಾಗಿರುವ ಆಶಾ ಭಟ್ ಹಿಂದಿಯ ಜಂಗ್ಲಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಾಬರ್ಟ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದು, ಸಿನಿಮಾ ರಿಲೀಸ್‍ಗೂ ಮುನ್ನವೇ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಲಾಕ್‍ಡೌನ್ ಇಲ್ಲದಿದ್ದಲ್ಲಿ ಏಪ್ರಿಲ್ 9ರಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರವೇ ನಿಮ್ಮ ಮುಂದೆ ಬರುತ್ತೇವೆ ಎಂದು ಡಿ ಬಾಸ್ ಟ್ವೀಟ್ ಮಾಡುವ ಮೂಲಕ ಈ ಹಿಂದೆ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *