ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಬದಲಾವಣೆ ಪರ್ವ- ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್‍ಗೆ ಚಾನ್ಸ್- ಖರ್ಗೆ, ಮೊಯ್ಲಿಗೆ ಹಿನ್ನೆಡೆ

Public TV
2 Min Read

ನವದೆಹಲಿ: ಅಧ್ಯಕ್ಷರ ಬದಲಾವಣೆಗೆ ಶುರುವಾದ ಲೆಟರ್ ಫೈಟ್ ಬಳಿಕ ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಎಐಸಿಸಿ ಅಧ್ಯಕ್ಷರ ಬದಲಾವಣೆ ಸಾಧ್ಯವಾಗದ ಹಿನ್ನೆಲೆ ಅದರ ಬದಲು ಹಲವು ಸಂಘಟನತ್ಮಾಕ ತಂಡಗಳನ್ನು ಪುನರ್ ರಚಿಸಿ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ, ಹಲವು ರಾಜ್ಯ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದೆ. ಇದರ ಜೊತೆಗೆ ಸೋನಿಯಗಾಂಧಿ ಅವರಿಗೆ ಸಂಘಟನತ್ಮಾಕ ವಿಚಾರಗಳಲ್ಲಿ ಸಲಹೆಗಾಗಿ ವಿಶೇಷ ಸಮಿತಿಯನ್ನು ರಚಿಸಲಾಗಿದೆ. ಹೊಸ ಪಟ್ಟಿಗಳಲ್ಲಿ ಸಿಡಬ್ಲ್ಯೂಸಿಯಲ್ಲಿ ಹೊರತುಪಡಿಸಿ ಬಾಕಿ ಟೀಂಗಳಲ್ಲಿ ಹಿರಿಯ ನಾಯಕರಿಗೆ ಕೋಕ್ ಕೊಟ್ಟಿದ್ದು ಯುವ ನಾಯಕರಿಗೆ ಆದ್ಯತೆ ಕೊಡಲಾಗಿದೆ. ಈ ಮೂಲಕ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬಹುತೇಕ ಎಲ್ಲ ಹಿರಿಯ ನಾಯಕರನ್ನು ಸದಸ್ಯರಾಗಿ ಮಾಡಲಾಗಿದೆ. ಪ್ರಮುಖವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಭೀ ಅಜಾದ್ ಸೇರಿದಂತೆ ಹಲವು ನಾಯಕರಿದ್ದಾರೆ. ಎಐಸಿಸಿ ಅಧ್ಯಕ್ಷರ ಸಹಾಯಕ್ಕೆ ರಚಿಸಿದ ವಿಶೇಷ ಸಮಿತಿಯಲ್ಲಿ ಎ.ಕೆ ಆ?ಯಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ ವೇಣುಗೋಪಾಲ್, ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಲೆವಾಲ್ ಗೆ ಅವಕಾಶ ನೀಡಲಾಗಿದೆ.

ಹಲವು ರಾಜ್ಯಗಳ ಉಸ್ತುವಾರಿಗಳ ಬದಲಾವಣೆಯಾಗಿದ್ದು ಮುಕುಲ್ ವಾಸ್ನಿಕ್ ಮಧ್ಯಪ್ರದೇಶಕ್ಕೆ, ಪಂಜಾಬ್ ಗೆ ಹರೀಶ್ ರಾವತ್, ಆಂಧ್ರಪ್ರದೇಶಕ್ಕೆ ಒಮನ್ ಚಾಂಡಿ, ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ವಾದ್ರಾ, ಕೇರಳಕ್ಕೆ ತಾರೀಖ್ ಅನ್ವರ್, ಅಸ್ಸಾಂಗೆ ಜಿತೇಂದ್ರ ಸಿಂಗ್, ರಾಜಸ್ಥಾನಕ್ಕೆ ಅಜೇಯ್ ಮಾಕೇನ್ ನೇಮಿಸಲಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹಲವು ರಾಜ್ಯಗಳ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯನ್ನು ಹೈಕಮಾಂಡ್ ಬದಲಿಸಿದೆ. ಉಸ್ತುವಾರಿಯಾಗಿದ್ದ ಕೆ.ಸಿ ವೇಣುಗೋಪಾಲ್ ಎಐಸಿಸಿ ಸಂಘಟನಾ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದ ಹಿನ್ನೆಲೆ ರಣದೀಪ್ ಸುರ್ಜೆವಾಲಾ ಅವರನ್ನು ನೂತನ ಉಸ್ತುವಾರಿಯಾಗಿ ನೇಮಕ ಮಾಡಿದೆ.

ರಾಜ್ಯದ ಹಲವು ನಾಯಕರಿಗೆ ಸ್ಥಾನ ಮಾನ ನೀಡಿದ ಕೈ ಕಮಾಂಡ್

* ಮಹಾರಾಷ್ಟ್ರದ ಉಸ್ತುವಾರಿಯಾಗಿ ಹೆಚ್.ಕೆ ಪಾಟೀಲ್
* ತಮಿಳುನಾಡು,ಪುದುಚೇರಿ,ಗೋವಾ ಉಸ್ತುವಾರಿಯಾಗಿ ದಿನೇಶ ಗುಂಡೂರಾವ್ ನೇಮಕವಾಗಿದ್ದಾರೆ
* ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಕೆ.ಹೆಚ್.ಮುನಿಯಪ್ಪ ಖಾಯಂ ಆಹ್ವಾನಿತರಾಗಿ ಮುಂದುವರಿದಿದ್ದು ದಿನೇಶ್ ಗುಂಡೂರಾವ್ ಮತ್ತು ಹೆಚ್.ಕೆ ಪಾಟೀಲ್ ಗೆ ಹೊಸದಾಗಿ ಅವಕಾಶ ನೀಡಿದೆ.
* ಎಐಸಿಸಿ ಕೇಂದ್ರ ಚುನಾವಣೆ ಸಮಿತಿಯಲ್ಲಿ ಸದಸ್ಯರಾಗಿ ಕೃಷ್ಣ ಬೈರೇಗೌಡ ಅವರನ್ನು ಆಯ್ಕೆ ಮಾಡಿದೆ.

ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿಗೆ ಹಿನ್ನೆಡೆ?
ಹೊಸ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಿಎಂ, ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಹಿನ್ನಡೆಯಾಗಿದೆ. ಈ ಬಾರಿ ಮೊಯ್ಲಿಗೆ ಹೈಕಮಾಂಡ್ ಎಲ್ಲೂ ಸ್ಥಾನ ಮಾನ ನೀಡಿಲ್ಲ, ಕಳೆದ ಬಾರಿ ಅವರನ್ನು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸದಸ್ಯರಾಗಿ ಮಾಡಿತ್ತು ಇನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಕಿತ್ತುಕೊಳ್ಳಲಾಗಿದೆ. ಆದ್ರೆ ಅವರನ್ನು ರಾಜ್ಯಸಭೆ ಸಭಾ ನಾಯಕ ಮಾಡುವ ಸಾಧ್ಯತೆ ಇದೆ ಎನ್ನಲಾಗಿದ್ದರು ಇದೊಂದು ತಾತ್ಕಾಲಿಕ ಹಿನ್ನಡೆ ಎನ್ನಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *