ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ- ಮೈಸೂರಲ್ಲಿಂದು ಚಾಮುಂಡಿ ದರ್ಶನ ಸಿಗಲ್ಲ

Public TV
3 Min Read

– ನಮ್ಮ ರಕ್ಷಣೆ ನಮ್ಮ ಹೊಣೆ ಎಂದ ಜನ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವ್ಯಾಪಕವಾಗಿ ಬೇರೂರಿದೆ. ಅದರಲ್ಲೂ ಅನ್‍ಲಾಕ್ ಬಳಿಕ ಸೋಂಕು ದಿನದಿನಕ್ಕೆ ಹೆಚ್ಚಳವಾಗುತ್ತಿದೆ. ಅನ್‍ಲಾಕ್ ಮಾಡಿದ ಸರ್ಕಾರ ಸೋಂಕಿಗೆ ಕಡಿವಾಣ ಹಾಕುವಲ್ಲಿ ವಿಫಲವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ರಕ್ಷಣೆ ಮಾಡಿಕೊಳ್ಳಲು ರಾಜ್ಯದ ಹಲವೆಡೆ ಸ್ವಯಂ ಲಾಕ್‍ಡೌನ್ ಘೋಷಣೆ ಮಾಡಿಕೊಳ್ಳಲಾಗುತ್ತಿದೆ.

ಮೈಸೂರಿನಲ್ಲಿ 3 ದಿನ ಸೆಲ್ಫ್ ಲಾಕ್‍ಡೌನ್
ಮೈಸೂರು ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಜಿಲ್ಲಾಡಳಿತ ತೀರ್ಮಾನಿಸಿದೆ. ಇಂದು ಮೊದಲ ಆಷಾಡ ಶುಕ್ರವಾರವಾದರೂ ಕೊರೊನಾ ಭಯಕ್ಕೆ ಚಾಮುಂಡೇಶ್ವರಿ ದೇಗುಲು ತೆರೆಯುತ್ತಿಲ್ಲ. ಬರೀ ಚಾಮುಂಡಿ ಬೆಟ್ಟ ಅಷ್ಟೇ ಅಲ್ಲ, ಮೈಸೂರಿನ ಬೇರೆ ಯಾವುದೇ ದೇವಾಲಯಗಳು ಕೂಡ ಮೂರು ದಿನ ದರ್ಶನಕ್ಕೆ ಲಭ್ಯ ಇರಲ್ಲ.

ಜೊತೆಗೆ ಶನಿವಾರ ಹಾಗೂ ಭಾನುವಾರ ಮೈಸೂರು ಅರಮನೆ ಹಾಗೂ ಮೃಗಾಲಯ ಬಂದ್‍ಗೆ ಪಾಲಿಕೆ ಆದೇಶಿಸಿದೆ. ಪ್ರಮುಖ 5 ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಸಂತೇಪೇಟೆ, ಶಿವರಾಂಪೇಟೆ, ಮನ್ನಾರ್ಸ್ ಮಾರ್ಕೆಟ್ ಮತ್ತು ಬೋಟಿ ಬಜಾರ್ ಗುರುವಾರದಿಂದ ನಾಲ್ಕು ದಿನ ಬಂದ್ ಮಾಡಲಾಗಿದೆ.

ಕನಕಪುರ, ಮಾಗಡಿ, ರಾಮನಗರದಲ್ಲಿ ಲಾಕ್‍ಡೌನ್
ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಕನಕಪುರ, ಮಾಗಡಿ ಹಾಗೂ ರಾಮನಗರ ಪಟ್ಟಣಗಳಲ್ಲಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಏರಲಾಗಿದೆ. ಬೆಳಗ್ಗೆ 6 ಗಂಟೆಯಿಂದ 11 ಗಂಟೆವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ಓಪನ್ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. 11 ಗಂಟೆ ಬಳಿಕ ಕಂಪ್ಲೀಟ್ ಲಾಕ್‍ಡೌನ್ ಮಾಡಲಾಗುತ್ತಿದೆ. ಅಗತ್ಯ, ತುರ್ತು ಸೇವೆ ಹೊರೆತುಪಡಿಸಿ ಎಲ್ಲವನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

ಚನ್ನಗಿರಿ ಹಾಗೂ ಹರಿಹರದಲ್ಲಿ ಸೆಲ್ಫ್ ಲಾಕ್‍ಡೌನ್
ದಾವಣಗೆರೆಯ ಚನ್ನಗಿರಿ ಹಾಗೂ ಹರಿಹರದಲ್ಲಿ ಸ್ಥಳೀಯ ಶಾಸಕರು, ಸಂಘ-ಸಂಸ್ಥೆಯವರು, ವಿವಿಧ ಪಕ್ಷದ ಮುಖಂಡರು ಸೇರಿ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡುತ್ತಿದ್ದಾರೆ. ಚನ್ನಗಿರಿಯಲ್ಲಿ ಬೆಳಗ್ಗೆ 8 ರಿಂದ 12 ರ ವರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಹರಿಹರದಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.

ಶಿಡ್ಲಘಟ್ಟದಲ್ಲಿ ವ್ಯಾಪಾರಿಗಳಿಂದ ಸೆಲ್ಫ್ ಲಾಕ್‍ಡೌನ್
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ವ್ಯಾಪಾರ ವಹಿವಾಟಿಗೆ ಸಮಯ ನಿಗದಿ ಮಾಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಸಂಜೆ 4 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವರ್ತಕರೇ ಸ್ವಯಂ ಲಾಕ್‍ಡೌನ್ ಹೇರಿಕೊಳ್ಳುತ್ತಿದ್ದಾರೆ.

ಶಿಗ್ಗಾಂವಿಯಲ್ಲಿ ಹೋಟೆಲ್ ಕಂಪ್ಲೀಟ್ ಬಂದ್
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರೋ ಹಿನ್ನೆಲೆ ಶಿಗ್ಗಾಂವಿ ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಜೂನ್ 30ರವರೆಗೆ ಹೊಟೇಲ್‍ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದಿನಸಿ ಅಂಗಡಿಗಳ ಓಪನ್ ಮಾಡಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ಅನ್‍ಲಾಕ್‍ನಲ್ಲೂ ಲಾಕ್‍ಡೌನ್ ಪಾಲಿಸುತ್ತಿದ್ದಾರೆ.

ರಾಜ್ಯಾದ್ಯಂತ ಅನ್‍ಲಾಕ್ ಆಗಿದ್ದರೂ ಕೊಲ್ಲೂರು ಗ್ರಾಮದಲ್ಲಿ ಮಾತ್ರ ಅಂಗಡಿಗಳು, ಹೋಟೆಲ್ ಓಪನ್ ಆಗಿಲ್ಲ. ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಕೊಲ್ಲೂರು ಗ್ರಾಮಕ್ಕೆ ಹೆಚ್ಚಾಗಿ ಕೇರಳ, ತಮಿಳುನಾಡು ಭಕ್ತರು ಆಗಮಿಸುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಆಗಸ್ಟ್ ವರೆಗೂ ಇಡೀ ಗ್ರಾಮಕ್ಕೆ ಸ್ವಯಂ ಪ್ರೇರಿತವಾಗಿ ಬಂದ್ ಹೇರಿಕೊಂಡಿದ್ದಾರೆ.

21 ದಿನ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಬಂದ್
ಧಾರವಾಡ ಜಿಲ್ಲೆಯ ಮೊರಬ ಗ್ರಾಮದಲ್ಲಿ ಇಲ್ಲಿವರೆಗೆ 40 ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಸಂಪೂರ್ಣ ಸಿಲ್‍ಡೌನ್ ಮಾಡಲಾಗಿದೆ. ಗ್ರಾಮದಿಂದ ಯಾರೂ ಹೊರಗೆ ಹೋಗುವಂತಿಲ್ಲ. ಗ್ರಾಮಕ್ಕೆ ಹೊರಗಿನವರು ಯಾರೂ ಒಳಗೆ ಬರುವಂತಿಲ್ಲ. ಗ್ರಾಮದ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಸೀಲ್‍ಡೌನ್ ಮಾಡಲಾಗಿದೆ. ಕೊಡಗಿನಲ್ಲಿ ಕೊರೊನಾ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಗುರುವಾರದಿಂದ 21 ದಿನ ಹೋಂ ಸ್ಟೇ, ರೆಸಾರ್ಟ್, ಹೊಟೇಲ್‍ಗಳನ್ನ ಬಂದ್ ಮಾಡಲಾಗಿದೆ. ಹೋಂ ಸ್ಟೇ ನಡೆಸುತ್ತಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಎಚ್ಚೆತ್ತುಕೊಂಡ ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಮಾಲೀಕರ ಸಂಘ ಹಾಗೂ ಜಿಲ್ಲೆಯ ಜನರು, ಅತಿಥಿಗಳ ಹಿತದೃಷ್ಟಿಯಿಂದ ಬಂದ್ ಸ್ವಯಂ ಲಾಕ್ ಏರಿಕೊಂಡಿದ್ದಾರೆ.

 

ಅಷ್ಟೇ ಅಲ್ಲ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಇಂದಿನಿಂದ 3 ದಿನ ಸೆಲ್ಪ್ ಲಾಕ್‍ಡೌನ್ ಏರಲಾಗಿದೆ. ಜೂನ್ 29 ರಿಂದ ಜುಲೈ 10ರ ವರೆಗೂ ಬೆಳಗ್ಗೆ 07 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ವಹಿವಾಟು ಮಾಡಲು ನಿರ್ಧರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಎಲ್ಲಾ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ವ್ಯಾಪಾರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *