ರಾಜ್ಯದ ಹಲವೆಡೆ ವರುಣನ ಅಬ್ಬರ- ನದಿಯಂತಾದ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ

Public TV
2 Min Read

– ಮಂಗಳೂರು, ಕೊಡಗು, ಚಿಕ್ಕಮಗಳೂರಿನಲ್ಲೂ ಮಳೆ

ಬೆಂಗಳೂರು: ರಾಜ್ಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಬೆಳಗಾವಿ, ಮಂಗಳೂರು, ಧಾರವಾಡ, ಹಾವೇರಿ, ಶಿವಮೊಗ್ಗ, ಬಾಗಲಕೋಟೆ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.

ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಮಳೆ ನೀರು ನುಗ್ಗಿದ್ದು, ಹುಕ್ಕೇರಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದ ಪರಿಣಾಮ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ರಸ್ತೆ ನದಿಯಂತಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸುರಿದಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ಆದರೆ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಮಳೆಯಾಗಿದೆ. ಬೆಳಗ್ಗೆಯಿಂದಲೇ ಪಶ್ಚಿಮ ಘಟ್ಟದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಭಾರೀ ಮಳೆಯಾಗಿ, ಬೆಳ್ತಂಗಡಿಯ ಕುಕ್ಕಾವು, ಚಾರ್ಮಾಡಿ ಪ್ರದೇಶದಲ್ಲಿ ಪ್ರವಾಹ ಮಾದರಿ ನೀರಿನ ಹರಿವು ಉಂಟಾಗಿದೆ, ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಬಾರೀ ಮಳೆಯಾಗಿ ಹಲವು ಪ್ರದೇಶಗಳು ಮಳೆ ನೀರಿನಿಂದ ಕೊಚ್ಚಿ ಹೋಗಿದ್ದವು. ಹೀಗಾಗಿ ಜನರಲ್ಲಿ ಭಯ ಮನೆ ಮಾಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಕೊಡಗು ಜಿಲ್ಲೆಯಲ್ಲಿ ಸಹ ಮಳೆಯ ಆಬ್ಬರ ಮುಂದುವರಿದಿದ್ದು, ಬೆಳಿಗ್ಗೆಯಿಂದಲೂ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆ ಕೊಡಗು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ್ದು, ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮುಳ್ಳಯ್ಯನಗಿರಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟ್‍ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಡೂರು, ತರೀಕೆರೆ ತಾಲೂಕಿನ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

ಹಾವೇರಿ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದೆ. ಹಾವೇರಿ ತಾಲೂಕಿನ ಯಲಗಚ್ಚ, ಹೊಸರಿತ್ತಿ, ಹಾಲಗಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆರಾಯನ ಆಗಮನದಿಂದ ರೈತರು ಹರ್ಷಗೊಂಡಿದ್ದಾರೆ.

ಧಾರವಾಡದಲ್ಲಿಯೂ ಮಳೆ ಅಬ್ಬರ ಜೋರಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಜೋರಾಗಿ ಶುರುವಾದ ಮಳೆ ಸಂಜೆಯವರೆಗೂ ಎಡೆವಿಡದೆ ಸುರಿದಿದೆ. ಇದರ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತರ ಬಿತ್ತನೆ ಕಾರ್ಯ ಚುರುಕುಗೊಂಡಂತಾಗಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ವರುಣ ತಂಪೆರೆದಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಸಹ ಭಾರೀ ಗಾಳಿ ಮಳೆಯಾಗಿದ್ದು, ಬಾದಾಮಿ ಪಟ್ಟಣದ ಐತಿಜಾಸಿಕ ಸ್ಥಳ ಅಕ್ಕ ತಂಗಿ ಜಲಪಾತ ಉಕ್ಕಿ ಹರಿಯುತ್ತಿದೆ. ಅಗಸ್ತ್ಯತೀರ್ಥ ಹೊಂಡ ಸಹ ಮೈದುಂಬಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ವರುಣ ತಂಪೆರೆದಿದ್ದು, ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಗಿದೆ. ಗುಡುಗು ಸಹಿತ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *