– ಬಾಳೆ ತೋಟ, ರೇಷ್ಮೆ ಗೂಡು ನಾಶ, ರೈತ ಕಂಗಾಲು
– ಚಿಕ್ಕಮಗಳೂರಿನಲ್ಲಿ ವರ್ಷದ ದೊಡ್ಡ ಮಳೆ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ರೈತರಮೊಗದಲ್ಲಿ ಮಂದಹಾಸ ಮೂಡಿದೆ.
ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ವರುಣನ ಆರ್ಭಟದಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಮಳೆ ಗಾಳಿ ರಭಸಕ್ಕೆ ಮರಗಳು ಧರೆಗುರುಳಿವೆ. ಅಲ್ಲದೆ ಗಾಳಿ ಸಹಿತ ಭಾರೀ ಮಳೆಗೆ ಮಂಡ್ಯದ ಡಿ.ಹೊಸೂರು ಗ್ರಾಮದಲ್ಲಿ ಚೆನ್ನಮ್ಮ ಅವರ ಬಾಳೆ ತೋಟ ನಾಶವಾಗಿದೆ. ಸುಮಾರು 60ಗುಂಟೆಗೂ ಅಧಿಕ ಬಾಳೆ ತೋಟ ನಾಶವಾಗಿದ್ದು, ಒಂದೂವರೆ ಲಕ್ಷ ರೂ. ನಷ್ಟ ಸಂಭವಿಸಿದೆ.
ರಾಮನಗರದಲ್ಲಿ ಸಹ ಗುಡುಗು ಸಹಿತ ಬಿರುಗಾಳಿ ಮಳೆಯಾಗಿದ್ದು, ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ರೇಷ್ಮೆ ಗೂಡು ನಾಶವಾಗಿದೆ. ರೇಷ್ಮೆ ಸಾಕಾಣಿಕೆ ಮನೆಯ ಶೀಟ್‍ಗಳು ಗಾಳಿಗೆ ಹಾರಿ ಹೋಗಿವೆ. ಅಲ್ಲದೆ ಇದೇ ಗ್ರಾಮದ ನಾಗವೇಣಿ ಅವರ ಮನೆಯ ಶೀಟ್‍ಗಳೂ ಹಾರಿ ಹೋಗಿದ್ದು, ಕುಟುಂಬಸ್ಥರು ಪರದಾಡುವಂತಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ವರುಣನ ಆರ್ಭಟ ಮುಂದುವರಿದಿದ್ದು, ಸಂಜೆಯಿಂದಲೂ ಮಳೆ ಅಬ್ಬರ ಜೋರಾಗಿತ್ತು. ಬಿರುಗಾಳಿ ಸಹಿತ ಮಳೆಗೆ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಬಣಕಲ್, ಬಾಳೂರು, ಮತ್ತಿಕಟ್ಟೆ, ಹೊಸಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯ ರಭಸಕ್ಕೆ ದಾರಿ ಕಾಣದೇ ರಸ್ತೆ ಮಧ್ಯೆಯೇ ವಾಹನಗಳು ಸಾಲುಗಟ್ಟಿ ನಿಂತಿದ್ದು, ಈ ವರ್ಷದ ದೊಡ್ಡ ಮಳೆಗೆ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ.
ಚಾಮರಾಜನಗರದ ಮಲೆ ಮಾದಪ್ಪನ ಬೆಟ್ಟದಲ್ಲಿ ಸಹ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಹಳ್ಳ, ಕೊಳ್ಳ, ರಸ್ತೆಗಳು ತುಂಬಿ ಹರಿದಿವೆ. ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ವರುಣನ ಸಿಂಚನದಿಂದ ಮಾದಪ್ಪನ ಬೆಟ್ಟದ ಕಾಡಂಚಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಅತ್ತ ಮೈಸೂರಿನಲ್ಲಿ ಸಹ ವರುಣ ಅಬ್ಬರಿಸಿದ್ದು, ಹಲವೆಡೆ ಮರ, ವಿದ್ಯುತ್ ಕಂಬ ಧರೆಗುರಳಿವೆ.