ರಾಜ್ಯದ ದಕ್ಷಿಣದಲ್ಲಿ ಬಿರುಗಾಳಿ ಸಹಿತ ಮಳೆ- ಉತ್ತರದಲ್ಲಿ ರಣ ಬಿಸಿಲು

Public TV
1 Min Read

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಆಗುತ್ತಿದ್ದರೆ, ಉತ್ತರ ಕರ್ನಾಟಕದಲ್ಲಿ ಬಿಸಿಲು ಜೋರಾಗಿದೆ.

ವಿಜಯಪುರ ಜಿಲ್ಲೆಯ ಇತಿಹಾಸದಲ್ಲೆ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ವಿಜಯಪುರದ ಜಿ. ಆಲಮೇಲ ಪಟ್ಟಣದಲ್ಲಿ ಇವತ್ತು ಗರಿಷ್ಠ 45.3 ಡಿಗ್ರಿ ತಾಪಮಾನ ದಾಖಲಾಗಿದೆ. ಕಳೆದ ಮೂರು ದಿನಗಳಿಂದ 45 ಡಿಗ್ರಿ ಆಸುಪಾಸಿನಲ್ಲಿಯೇ ಉಷ್ಣಾಂಶ ಇದೆ. ಬಿಸಿಲ ಝಳದಿಂದ ವಿಜಯಪುರದ ಮಂದಿ ತತ್ತರಿಸಿ ಹೋಗಿದ್ದಾರೆ. ಕೊಡೆಗಳನ್ನು ಹೊರತೆಗೆದಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವರದಿ ಪ್ರಕಾರ ಆಲಮೇಲದ ಬಿಸಿಲು ರಾಜಸ್ಥಾನದ ಮರುಭೂಮಿಯ ಬಿಸಿಲನ್ನು ನೆನಪಿಸುತ್ತಿದೆ.

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಮಳೆರಾಯ ಅಬ್ಬರಿಸಿದ್ದಾನೆ. ಗುಡುಗು ಮಿಂಚು ಸಮೇತ ಬೆಂಗಳೂರಿನ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿಯೇ ಆಗಿದೆ. ಮಳೆ ನಿಂತ ಮೇಲೆ ರೋಡ್‍ಗಳು ಕೆರೆಗಳಾಗಿವೆ. ಬೆಂಗಳೂರಿನ ಡಬ್ಬಲ್ ರೋಡ್‍ನಲ್ಲಿ ರೋಡ್ ಯಾವುದು ಎನ್ನುವುದೇ ಗೊತ್ತಾಗದಂತೆ ಮಳೆ ನೀರು ನಿಂತಿದ್ದು ವಾಹನ ಸವಾರರು ನರಕ ಅನುಭವಿಸುತ್ತಿದ್ದಾರೆ. ಇನ್ನೊಂದು ಕಡೆ ವಿಲ್ಸನ್ ಗರ್ಡನ್‍ಗೆ ಹೋಗುವ ರೋಡ್ ಸಂಪೂರ್ಣ ಜಲವೃತವಾಗಿದ್ದು, ಮಳೆ ನೀರಿನಿಂದ ರೋಡ್ ಕೆರೆಯಾಗಿದೆ.

ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ ಸೇರಿದಂತೆ ಹಲವಡೆ ಬಿರುಸಿನ ಮಳೆಯಾಗಿದೆ. ಭಾನುವಾರ ಲಾಕ್‍ಡೌನ್ ಆಗಿದ್ದರಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇಂದು ಕೆಲಸ ಮುಗಿಸಿ ಮನೆಯತ್ತ ಹೊರಟ ಜನರು ಮಳೆಯಲ್ಲಿ ಸಿಲುಕಿದರು.

ಕೋಲಾರ: ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *