ರಾಜ್ಯದ ಅತೀ ದೊಡ್ಡ ಆಸ್ಪತ್ರೆಯ ಕರ್ಮಕಾಂಡ ಬಯಲು – ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಗಿಮಿಕ್

Public TV
2 Min Read

ಬೆಂಗಳೂರು: ರಾಜ್ಯದ ಅತಿದೊಡ್ಡ ಆಸ್ಪತ್ರೆಯಲ್ಲಿ ಮೋದಿಯ ಮಹತ್ವಾಕಾಂಕ್ಷೆ ಯೋಜನೆ ಹಳ್ಳ ಹಿಡಿಯುತ್ತಿದೆ. ಆಸ್ಪತ್ರೆ ಒಳಗೆ ಆರೋಗ್ಯ ಕಾರ್ಡ್‍ಗೆ ಅರ್ಜಿ ಹಾಕಲು ಅವಕಾಶ ಇದ್ದರೂ, ಆಸ್ಪತ್ರೆ ಹೊರಗೆ ಕಾರ್ಡ್ ಮಾಡುತ್ತಾ ಇಲ್ಲ ಎಂದು ಸಿಬ್ಬಂದಿ ಬಡ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಬಡ ಜನರದ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಆಸ್ಪತ್ರೆಯ ಕರ್ಮ ಕಾಂಡವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮೂಲಕ ಬಯಲು ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆ ಯೋಜನೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್. ಈ ಯೋಜನೆ ಅಡಿ ಬಡ ಜನರು 161 ಖಾಯಿಲೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಈ ಕಾರ್ಡ್ ಅನ್ನು ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಕೊಡಲಾಗುತ್ತದೆ. ಕೋವಿಡ್‍ನಿಂದಾಗಿ ಎಂಟು ತಿಂಗಳಿನಿಂದ ಕಾರ್ಡ್ ಮಾಡಿಸಲು ಜನರಿಗೆ ಸಾಧ್ಯ ಆಗಿರಲಿಲ್ಲ. ಈಗ ಕೋವಿಡ್ ಸಂಖ್ಯೆ ಕಡಿಮೆ ಆಗಿದ್ದು, ಕೋವಿಡ್ ಆಸ್ಪತ್ರೆಗಳಾಗಿದ್ದ ಸರ್ಕಾರಿ ಆಸ್ಪತ್ರೆಗಳು ನಾನ್ ಕೋವಿಡ್ ಆಸ್ಪತ್ರೆಗಳಾಗಿವೆ. ಇದೀಗ ಆರೋಗ್ಯ ಭಾಗ್ಯ ಕಾರ್ಡ್ ಅನ್ನು ಮಾಡಿಸಬಹುದು. ಆದರೆ ರಾಜ್ಯದ ಅತಿದೊಡ್ಡ ಆಸ್ಪತ್ರೆ ವಿಕ್ಟೋರಿಯಾದ ಪಿಎಂಎಸ್‍ಎಸ್‍ವೈ ಆಸ್ಪತ್ರೆಯಲ್ಲಿ ಕಾರ್ಡ್ ಮಾಡಿಕೊಡದೇ, ಈ ಕುರಿತಂತೆ ಬಡ ಜನರಿಗೆ ತಪ್ಪು ಮಾಹಿತಿಯನ್ನು ಆರೋಗ್ಯ ಸಿಬ್ಬಂದಿ ನೀಡುತ್ತಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ವಿಕ್ಟೋರಿಯಾದ ಪಿಎಂಎಸ್‍ಎಸ್ ವೈ ಆಸ್ಪತ್ರೆ ಕೋವಿಡ್ ಆಸ್ಪತ್ರೆಗಳಾಗಿದ್ದವು. ಈಗ ಪಿಎಂಎಸ್‍ಎಸ್‍ವೈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಿಂದ ಕೈ ಬಿಟ್ಟು ನಾನ್ ಕೋವಿಡ್ ಆಗಿ ಮಾಡಲಾಗಿದೆ. ಆದರೆ ಸಾಮಾನ್ಯ ಜನರಿಗೆ ಆಸ್ಪತ್ರೆ ಒಳಗಡೆ ಪ್ರವೇಶವನ್ನು ಮಾಡುತ್ತಿಲ್ಲ. ಸಾಕಷ್ಟು ಸ್ಟ್ರಿಟ್ ಮಾಡಿ ಎಲ್ಲಾ ರೀತಿ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ. ಈ ಸಮಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಬೇಕು ಎಂದು ಅಲ್ಲಿನ ಸೆಕ್ಯುರಿಟಿ ಮತ್ತು ಆರೋಗ್ಯ ಸಿಬ್ಬಂದಿಯನ್ನ ಕೇಳಿದಾಗ, ಕಾರ್ಡ್ ಮಾಡಲಾಗುತ್ತಿಲ್ಲ ಹಾಗಾಗಿ ಒಳಗಡೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಆಸ್ಪತ್ರೆ ಗೇಟ್ ಹೊರಗಡೆ ಕಾರ್ಡ್ ಮಾಡಿಸಲು ಬಂದಂತಹ ಬಡಜನರಿಗೆ ಕಾರ್ಡ್ ಮಾಡಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದರು. ಆದರೆ ನಿಮ್ಮ ಪಬ್ಲಿಕ್ ಟವಿ ಆಸ್ಪತ್ರೆ ಒಳಗಡೆ ಹೋಗಿ ಆರೋಗ್ಯ ಸಿಬ್ಬಂದಿಯನ್ನ ವಿಚಾರಿಸಿದಾಗ ಅಲ್ಲಿಯೂ ಕೂಡ ಮಾಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆಸ್ಪತ್ರೆ ಕೌಂಟರ್ ಗೆ ಹೋಗಿ ಆರೋಗ್ಯ ಸಿಬ್ಬಂದಿ ರಿಸೆಪ್ಷನಿಸ್ಟ್‍ನನ್ನು ವಿಚಾರಿಸಿದಾಗ ಈ ಕುರಿತಂತೆ ನಮಗೆ ಸರಿಯಾದ ಮಾಹಿತಿ ಇಲ್ಲ. ಹಿರಿಯ ಆರೋಗ್ಯಧಿಕಾರಿಗಳನ್ನ ವಿಚಾರಿಸಿದರೆ ಆರೋಗ್ಯ ಕಾರ್ಡ್ ಮಾಡಿಸಲು ಅರ್ಜಿಯನ್ನು ಕೊಡುತ್ತಾರೆ ಎಂದಿದ್ದಾರೆ.

ಆಸ್ಪತ್ರೆ ಗೇಟ್ ಮುಂದೆ ಬಡ ಜನರಿಗೆ ಆಸ್ಪತ್ರೆ ಒಳಗಡೆ ಹೋಗುವುದಕ್ಕೂ ಅವಕಾಶ ನೀಡದೇ, ಆರೋಗ್ಯ ಭಾಗ್ಯ ಕಾರ್ಡ್ ಮಾಡುತ್ತಿಲ್ಲ ಎಂದು ಸುಳ್ಳು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಪಬ್ಲಿಕ್ ಟಿವಿಯ ಸಿಬ್ಬಂದಿ ಆಸ್ಪತ್ರೆ ಒಳಗಡೆ ರಹಸ್ಯ ಕಾರ್ಯಾಚರಣೆ ಮಾಡಿ ಹೆಲ್ತ್ ಕಾರ್ಡ್ ಬಗ್ಗೆ ವಿಚಾರಿಸಿದರೆ ಕಾರ್ಡ್ ಮಾಡಿಸಲು ಅರ್ಜಿ ಕೊಡುತ್ತಾರೆ. ಈ ರೀತಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಬಗ್ಗೆ ಸುಳ್ಳು ಮಾಹಿತಿ ನೀಡಿ ಬಡ ಜನರು ಕಾರ್ಡ್ ಮಾಡಿಸಲು ಸಾಧ್ಯವಾಗದೇ ಇರುವಂತೆ ಮಾಡುತ್ತಿದ್ದಾರೆ.

ಒಟ್ಟಾರೆ ಉಚಿತ ಚಿಕಿತ್ಸೆ ಪಡೆಯಲು ಬಡ ಜನರಿಗೆ ಈ ಯೋಜನೆ ತುಂಬಾ ಸಹಕಾರಿ. ಆದರೆ ಇಂತಹ ಆಸ್ಪತ್ರೆ ಸಿಬ್ಬಂದಿ ತಪ್ಪು ಮಾಹಿತಿಯಿಂದ ಜನರು ಯೋಜನೆ ಸೌಲಭ್ಯದಿಂದ ವಂಚಿತರಾಗುತ್ತಾ ಇದ್ದಾರೆ. ಈ ಕೂಡಲೇ ಸರ್ಕಾರ ಮತ್ತು ಆರೋಗ್ಯಾಧಿಕಾರಿಗಳು ಎಚ್ಚೆತ್ತು ಜನರಿಗೆ ಸರಿಯಾದ ಮಾಹಿತಿ ನೀಡಿ ಯೋಜನೆ ಸೌಲಭ್ಯ ಪಡೆಯುವಂತೆ ಅವಕಾಶ ಮಾಡಿಕೊಡುತ್ತಾರಾ ಎಂದು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *